ADVERTISEMENT

ಕಾಳಿ ಸೇತುವೆ: ಬೀಡು ಬಿಟ್ಟ 4 ಬಾರ್ಜ್

ತಾಂತ್ರಿಕ ಸಿದ್ಧತೆಗಳು ಬಹುತೇಕ ಪೂರ್ಣ:ದೀಪಾವಳಿ ಬಳಿಕ ಕಾರ್ಯಾಚರಣೆ?

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 13:40 IST
Last Updated 27 ಅಕ್ಟೋಬರ್ 2024, 13:40 IST
ಕಾಳಿ ಸೇತುವೆ ತೆರವು ಕಾರ್ಯಾಚರಣೆ ಸಲುವಾಗಿ ಬಂದಿರುವ ಬಾರ್ಜ್ ಸಮುದ್ರ ಇಳಿತ ಇದ್ದ ಕಾರಣ ಜೆಟ್ಟಿಯಿಂದ ದೂರದಲ್ಲಿ ನಿಲುಗಡೆಯಾಗಿತ್ತು
ಕಾಳಿ ಸೇತುವೆ ತೆರವು ಕಾರ್ಯಾಚರಣೆ ಸಲುವಾಗಿ ಬಂದಿರುವ ಬಾರ್ಜ್ ಸಮುದ್ರ ಇಳಿತ ಇದ್ದ ಕಾರಣ ಜೆಟ್ಟಿಯಿಂದ ದೂರದಲ್ಲಿ ನಿಲುಗಡೆಯಾಗಿತ್ತು   

ಕಾರವಾರ: ಇಲ್ಲಿನ ಕಾಳಿ ನದಿಗೆ ಕುಸಿದು ಬಿದ್ದಿರುವ ಹಳೆಯ ಸೇತುವೆಯ ಅವಶೇಷ ತೆರವುಗೊಳಿಸುವ ಜತೆಗೆ ಉಳಿದಿರುವ ಸೇತುವೆಯ ಭಾಗವನ್ನು ತೆರವು ಮಾಡುವ ಕಾರ್ಯಾಚರಣೆ ನಡೆಸಲು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಭಾನುವಾರ ಎರಡು ವಿಶೇಷ ಬಾರ್ಜ್‍ಗಳು ಸೇತುವೆ ಸಮೀಪದ ಜೆಟ್ಟಿ ಬಳಿ ತಲುಪಿವೆ.

ಆ.7ರ ತಡರಾತ್ರಿ ಕುಸಿದು ಬಿದ್ದ ಸೇತುವೆಯ ಅವಶೇಷಗಳು ನದಿಯಲ್ಲೇ ಉಳಿದುಕೊಂಡಿವೆ. ಸೇತುವೆಯ 330 ಮೀ.ನಷ್ಟು ಭಾಗವೂ ಹಾಗೆಯೇ ನಿಂತಿದ್ದು, ಅದನ್ನೂ ತೆರವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. ಹೀಗಾಗಿ, ತೆರವು ಕಾರ್ಯ ನಡೆಸಲು ರಾಷ್ಟ್ರೀಯ ಹೆದ್ದಾರಿ–66ರ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಕಂಪನಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಳೆದ ಮೂರು ವಾರಗಳ ಹಿಂದೆಯೇ ಎರಡು ಬಾರ್ಜ್‍ಗಳು ಸೇತುವೆ ತೆರವು ಕಾರ್ಯಾಚರಣೆ ಸಲುವಾಗಿ ಜೆಟ್ಟಿಗೆ ಬಂದು ತಲುಪಿದ್ದವು. ಕಾಂಕ್ರೀಟ್ ಕತ್ತರಿಸುವ ಯಂತ್ರಗಳನ್ನು ಒಳಗೊಂಡಿರುವ ಬಾರ್ಜ್ ಬಾರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಗೊಂಡಿರಲಿಲ್ಲ. ಭಾನುವಾರ ಕಾಂಕ್ರೀಟ್ ಒಡೆಯುವ ಸಾಮರ್ಥ್ಯದ ಯಂತ್ರವನ್ನು ಒಳಗೊಂಡ ಬಾರ್ಜ್ ಮತ್ತು ಇನ್ನೊಂದು ಬಾರ್ಜ್ ಕೂಡ ಜೆಟ್ಟಿ ಸಮೀಪ ತಲುಪಿದವು.

ADVERTISEMENT

ಮುಂಬೈನಿಂದ ಹೊರಟಿದ್ದ ಎರಡೂ ಬಾರ್ಜ್‍ಗಳು ನಸುಕಿನ ಜಾವ ಕಾರವಾರ ಸಮೀಪಿಸಿದ್ದವು. ಸಮುದ್ರ ಇಳಿತದ ಕಾರಣ ಒಂದು ಬಾರ್ಜ್ ಕೆಲ ತಾಸುಗಳವರೆಗೆ ದೇವಗಡ ದ್ವೀಪದ ಬಳಿ ನಿಂತಿತ್ತು. ಬಳಿಕ ಕೋಡಿಬಾಗದಲ್ಲಿರುವ ಕಾಳಿನದಿಯ ಜೆಟ್ಟಿ ಸಮೀಪಿಸಿತಾದರೂ ನೀರು ಕಡಿಮೆ ಇದ್ದ ಕಾರಣ ಜೆಟ್ಟಿಯಿಂದ 200 ಮೀ. ದೂರದಲ್ಲಿ ನಿಲುಗಡೆಯಾಗಿತ್ತು.

‘ಸೇತುವೆಯ ಅವಶೇಷ ತೆರವು ಕಾರ್ಯಾಚರಣೆ ನಡೆಸಲು ಅಗತ್ಯವಿದ್ದ ನಾಲ್ಕು ಬಾರ್ಜ್ ಜೆಟ್ಟಿಗೆ ತಲುಪಿದಂತಾಗಿದೆ. ಅಗತ್ಯ  ಯಂತ್ರೋಪಕರಣಗಳನ್ನೂ ತರಿಸಿಕೊಳ್ಳಲಾಗಿದೆ. ಅವಶೇಷ ತೆರವಿಗೆ ನುರಿತ ಕಾರ್ಮಿಕರು ಬರಬೇಕಿದ್ದು, ದೀಪಾವಳಿ ಹಬ್ಬ ಮುಗಿದ ನಂತರವೇ ಅವರು ಬರಲಿದ್ದಾರೆ. ಹಬ್ಬ ಮುಗಿದ ತಕ್ಷಣ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸುತ್ತೇವೆ’ ಎಂದು ಐ.ಆರ್.ಬಿ ಕಂಪನಿಯ ಎಂಜಿನಿಯರ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಾರವಾರದ ಕಾಳಿ ಸೇತುವೆ ಅವಶೇಷ ತೆರವುಗೊಳಿಸುವ ಕಾರ್ಯಾಚರಣೆ ಸಲುವಾಗಿ ಭಾನುವಾರ ಮೂರನೆ ಬಾರ್ಜ್ ಕೋಡಿಬಾಗದ ಜೆಟ್ಟಿಗೆ ಬಂದು ತಲುಪಿತು

ಸಮುದ್ರ ಇಳಿತದ ಕಾರಣ ಜೆಟ್ಟಿಯಿಂದ 200 ಮೀ. ದೂರದಲ್ಲಿ ನಿಲುಗಡೆ ನುರಿತ ಕಾರ್ಮಿಕರ ಆಗಮನಕ್ಕೆ ನಿರೀಕ್ಷೆ ದಾಸ್ತಾನು ಆದ ಯಂತ್ರೋಪಕರಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.