ADVERTISEMENT

ಕುಮಟಾ: ಎಚ್ಚರಿಕೆಯಿದ್ದರೆ ಅಘನಾಶಿನಿಯ ಸೊಬಗು!

ಕುಮಟಾ ತಾಲ್ಲೂಕಿನ ಕೀರ್ತಿಗದ್ದೆಯ ಬಳಿ ಆಕರ್ಷಕ ತಾಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 17:30 IST
Last Updated 15 ಅಕ್ಟೋಬರ್ 2019, 17:30 IST
ಕೀರ್ತಿಗದ್ದೆ ಬಳಿ ಕಲ್ಲುಬಂಡೆ ನಡುವೆ ರಭಸದಿಂದ ಹರಿಯುವ ಅಘನಾಶಿನಿ
ಕೀರ್ತಿಗದ್ದೆ ಬಳಿ ಕಲ್ಲುಬಂಡೆ ನಡುವೆ ರಭಸದಿಂದ ಹರಿಯುವ ಅಘನಾಶಿನಿ   

ಕುಮಟಾ: ತಾಲ್ಲೂಕಿನ ಕೀರ್ತಿಗದ್ದೆ ಬಳಿ ಕಲ್ಲು ಬಂಡೆಯ ಕಾಡಿನ ನಡುವಿನ ಅಘನಾಶಿನಿ ನದಿ ಹರಿಯುವ ಪ್ರದೇಶ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದರೆ, ಅಪಾಯಕಾರಿಯಾಗಿರುವ ಈ ಸ್ಥಳದಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.

ನದಿ ದಡದಲ್ಲಿ ಎತ್ತರಕ್ಕೆ ಹರಡಿರುವ ಕಲ್ಲು ಹಾಸು ನೈಸರ್ಗಿಕ ಸುಖಾಸನಗಳಂತಿವೆ. ಕೆಳಗೆ ಕುಳಿತವರಿಗೆ ಬಿಸಿಲು ತಗುಲದಂತೆ ಮೇಲೆ ಮರದ ನೆರಳಿನ ಚಪ್ಪರವಿದೆ. ಇಲ್ಲಿಗೆ ಬಂದು ಕುಳಿತು ಸ್ವಲ್ಪ ದಣಿವಾರಿಸಿಕೊಂಡ ನಂತರ ಎಂಥವರಿಗೂ ರಭಸದಿಂದ ಹರಿಯುವ ನದಿಯ ನೀರನ್ನು ಮುಟ್ಟದೆ ಇರಲಾಗದು.

ಅಪಾಯಕಾರಿ ಸ್ಥಳ:ನೀರನ್ನು ಸ್ಪರ್ಶಿಸಿದವರು ಹುಚ್ಚಾಸೆ ತಡೆಯಲಾದೆ ಈಜಲು ಹೋದರೋ ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಹೆಚ್ಚು. ಕೀರ್ತಿಗದ್ದೆಯ ಅರಣ್ಯ ಇಲಾಖೆ ಸಸ್ಯಪಾಲನಾ ಕೇತ್ರದ ದ್ವಾರದಿಂದ ನೇರವಾಗಿ ನದಿ ದಡಕ್ಕೆ ಬರಬಹುದು. ಆದರೆ,ಇಲ್ಲಿಯ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಅಪರಿಚಿತರನ್ನು ನದಿಗೆ ಹೋಗಲು ಬಿಡುವುದಿಲ್ಲ.

ADVERTISEMENT

‘ಪ್ರವಾಸಕ್ಕೆಂದು ಇಲ್ಲಿಗೆ ಬಂದ ಹೊರ ಜಿಲ್ಲೆಯ ವ್ಯಕ್ತಿಯೊಬ್ಬರು ನಮ್ಮ ಕಣ್ಣು ತಪ್ಪಿಸಿ ಹರಿಯುವ ನೀರಿನಲ್ಲಿ ಈಜುವಾಗ ಕೊಚ್ಚಿಕೊಂಡು ಹೋಗಿ ಮೃತಪಟ್ಟರು. ಅಂದಿನಿಂದ ಈ ದ್ವಾರದ ಮೂಲಕ ಅಪರಿಚಿತರನ್ನು ನದಿಗೆ ಬಿಡುವುದಿಲ್ಲ. ರಭಸದಿಂದ ಹರಿಯುವ ನೀರಿನ ಒಳ ಹರಿವಿನ ಅಂದಾಜಿಲ್ಲದೆ ನದಿಗೆ ಇಳಿದವರುಪ್ರಾಣಕಳೆದುಕೊಳ್ಳುತ್ತಾರೆ’ ಎಂದು ಸಸ್ಯಪಾಲನಾಕ್ಷೇತ್ರದ ಸಿಬ್ಬಂದಿ ತಿಳಿಸಿದರು.

ಕೊಂಚ ಎಚ್ಚರಿಕೆ ವಹಿಸಿದರೆ ಕುಟುಂಬ ಸಹಿತ ಇಲ್ಲಿಗೆ ಬಂದು ನದಿಯ ಸೊಬಗನ್ನು ಸವಿದು ಅರ್ಧ ದಿನ ಕಳೆದು ಹೋಗಬಹುದು. ಕುಡಿದು, ತಿಂದು ಮಜಾ ಮಾಡಿ ನದಿಯ ಪರಿಸರ ಹಾಳು ಮಾಡುವವರಿಗೆ ಅಪಾಯ ಹೆಚ್ಚು. ಇಲ್ಲಿ ಅಘನಾಶಿನಿಯ ಸೊಬಗನ್ನು ಸವಿಯಬೇಕಾದರೆ ನೀರಿಗೆ ಇಳಿಯದಂಥ ಸಂಯಮವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಅರಣ್ಯ ಇಲಾಖೆ ಸಸ್ಯಪಾಲನಾ ಕ್ಷೇತ್ರದ ಕಾಳಜಿಯಿಂದ ನದಿ ದಂಡೆಯ ಸುತ್ತಲಿನ ಶುಚಿತ್ವ ಕಾಪಾಡಲು ಸಾಧ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.