ADVERTISEMENT

ಕುಮಟಾ: ಐದು ಎಕರೆ ಗದ್ದೆಯಲ್ಲಿ 600 ತಳಿ ಭತ್ತ

ಅಧ್ಯಯನಕ್ಕಾಗಿ ಸಂಶೋಧಕರಿಗೆ, ಬೇಸಾಯಕ್ಕೆ ರೈತರಿಗೆ ಬಿತ್ತನೆ ಬೀಜ ವಿತರಣೆ

ಎಂ.ಜಿ.ನಾಯ್ಕ
Published 18 ಅಕ್ಟೋಬರ್ 2024, 7:45 IST
Last Updated 18 ಅಕ್ಟೋಬರ್ 2024, 7:45 IST
ಕುಮಟಾ ತಾಲ್ಲೂಕಿನ ಕಾಗಾಲದ ಕೃಷಿಕ ನಾಗರಾಜ ನಾಯ್ಕ ಅವರ ಗದ್ದೆಯಲ್ಲಿ ಬೆಳೆದ ‘ಲಾವಣ್ಯ’ ತಳಿಯ ಕಪ್ಪು ಭತ್ತ
ಕುಮಟಾ ತಾಲ್ಲೂಕಿನ ಕಾಗಾಲದ ಕೃಷಿಕ ನಾಗರಾಜ ನಾಯ್ಕ ಅವರ ಗದ್ದೆಯಲ್ಲಿ ಬೆಳೆದ ‘ಲಾವಣ್ಯ’ ತಳಿಯ ಕಪ್ಪು ಭತ್ತ   

ಕುಮಟಾ: ತಾಲ್ಲೂಕಿನ ಕಾಗಾಲದ ಭತ್ತದ ಗದ್ದೆಯೊಂದು ಕೃಷಿ ಸಂಶೋಧಕರಿಗೆ ಅಧ್ಯಯನದ ಸ್ಥಳವಾದರೆ, ಕೃಷಿಕರಿಗೆ ಹೊಸ ತಳಿಯ ಭತ್ತದ ಬೀಜ ಒದಗಿಸುವ ಕಣಜವಾಗಿದೆ. ಸಾಧಾರಣ ಕೃಷಿಭೂಮಿಯನ್ನು ಅಸಾಧಾರಣಗೊಳಿಸಿದ್ದು ನಾಗರಾಜ ನಾಯ್ಕ ಎಂಬ ಪ್ರಗತಿಪರ ಕೃಷಿಕ.

ಗ್ರಾಮದಲ್ಲಿರುವ ಐದು ಎಕರೆ ಜಮೀನಿನಲ್ಲಿ ಅಪರೂಪದ ‘ಕಗ್ಗ’ ಭತ್ತದೊಂದಿಗೆ 600ಕ್ಕೂ ಹೆಚ್ಚು ತಳಿಯ ಭತ್ತ ಬೆಳೆದಿರುವ ಅವರು, ಹತ್ತಾರು ತಳಿಯ ಭತ್ತದ ಬೀಜಗಳನ್ನು ಕೃಷಿಕರಿಗೆ ನೀಡಿ ಬೇಸಾಯಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.

ಎರಡು ಎಕರೆ ಪ್ರದೇಶದಲ್ಲಿ ಕಗ್ಗ ಭತ್ತ ಬೆಳೆದಿದ್ದು, ಉಳಿದ ಮೂರು ಎಕರೆ ಪ್ರದೇಶದಲ್ಲಿ ಬಗೆ ಬಗೆಯ ಭತ್ತ ಬೆಳೆದಿದ್ದಾರೆ. ಅವು ಕಟಾವಿಗೆ ಬಂದಿದೆ.

ADVERTISEMENT

‘ಕಗ್ಗ ಭತ್ತದ ಇಳುವರಿ ಉಳಿದ ಭತ್ತದ ಇಳುವರಿಗಿಂತ ತೀರಾ ಕಡಿಮೆ. ಎರಡು ಎಕರೆ ಪ್ರದೇಶದಲ್ಲಿ ಸುಮಾರು 6 ರಿಂದ 8 ಕ್ವಿಂಟಲ್ ಇಳುವರಿ ಬರುತ್ತದೆ. ಕಳೆದ ವರ್ಷ 3 ಕ್ವಿಂಟಲ್ ಕಗ್ಗ ಅಕ್ಕಿಯನ್ನು ಕಾರ್ಪೋರೇಟ್ ಮಾದರಿಯ ಪ್ಯಾಕೇಟ್‍ನಲ್ಲಿಟ್ಟು ಮಾರಾಟ ಮಾಡಲಾಗಿದೆ. ಲಾಭದ ಪ್ರಮಾಣ ಹೆಚ್ಚಿರದಿದ್ದರೂ ಅಳಿವಿನಂಚಿನ ಭತ್ತದ ತಳಿ ಉಳಿಸುವ ತೃಪ್ತಿ ಇದೆ’ ಎನ್ನುತ್ತಾರೆ ನಾಗರಾಜ ನಾಯ್ಕ.

‘ಮಧುಮೇಹಿಗಳು ಬಳಸುವ ಆರ್.ಎನ್.ಆರ್. ತಳಿಯ ಭತ್ತದ 3 ಕ್ವಿಂಟಾಲ್ ಬಿತ್ತನೆ ಬೀಜವನ್ನು ಸುತ್ತಲಿನ ಬಾಡ, ಹೊಲನಗದ್ದೆ, ತಾಲ್ಲೂಕಿನ ಹಳದಿಪುರ, ಬೆಳಗಾವಿ ಹಾಗೂ ಹಳಿಯಾಳದ ರೈತರಿಗೆ ನೀಡಲಾಗಿದೆ. 5 ಕ್ವಿಂಟಲ್‌ಗಳಷ್ಟು ಮೌದಾಮಣಿ ತಳಿಯ ಬೀಜವನ್ನು ಭಟ್ಕಳ, ಶಿವಮೊಗ್ಗ, ಸಾಗರ, ಕಾರ್ಕಳ, ಹೊನ್ನಾವರದ ಅನೇಕ ರೈತರು ಕೊಂಡೊಯ್ದು ಕೃಷಿ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ಧಾರವಾಡ ಕೃಷಿ ವಿಶ್ವವಿದ್ಯಾಲಯ, ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರಕ್ಕೆ ಬೇರೆ ಬೇರೆ ತಳಿಯ ಭತ್ತ ಬೆಳೆದು ಕೊಡುತ್ತಿದ್ದೆವು. ಈ ಬಾರಿ ಗೋವಾ ಕೃಷಿ ವಿಶ್ವವಿದ್ಯಾಲಯದವರು ಸುಮಾರು 65 ಬಗೆಯ ಭತ್ತದ ಬೀಜ ಬೆಳೆದುಕೊಡುವಂತೆ ಕೇಳಿದ್ದಾರೆ’ ಎಂದು ತಿಳಿಸಿದರು.

ಕುಮಟಾ ತಾಲ್ಲೂಕಿನ ಕಾಗಾಲದಲ್ಲಿರುವ ಭತ್ತದ ಬೆಳೆಯೊಂದಿಗೆ ಕೃಷಿಕ ನಾಗರಾಜ ನಾಯ್ಕ

ವಿಶೇಷ ಭತ್ತದ ತಳಿಗಳ ಬೇಸಾಯ

‘ತೆನೆ ಹುಲ್ಲು ಭತ್ತ ಹಾಗೂ ಅಕ್ಕಿ ಎಲ್ಲ ಕಪ್ಪು ಬಣ್ಣವಿರುವ ಲಾವಣ್ಯ ಬುದ್ಧ ಪರ್ಪಲ್ ಪುಟ್ಟ ಡಾಂಬರು ಸಾಳಿ ತಳಿಯ ಭತ್ತ ಬೆಳೆಸಿದ್ದೇವೆ. ಸುವಾಸನೆಯುಕ್ತ ಭತ್ತದ 50 ತಳಿಯನ್ನೂ ಬೆಳೆಸಲಾಗಿದೆ. 25 ಕೆ.ಜಿಯಷ್ಟು ‘ರಾಜಮುಡಿ’ ಹಾಗೂ 2 ಕ್ವಿಂಟಲ್‍ನಷ್ಟು ‘ಗೋವಾ ಧಾನ್’ ವಿಶೇಷ ತಳಿಯನ್ನು ಪ್ರಾಯೋಗಿಕವಾಗಿ ಬೆಳೆಸಿದ್ದೇನೆ’ ಎಂದು ವಿವರಿಸುತ್ತಾರೆ ಕೃಷಿಕ ನಾಗರಾಜ ನಾಯ್ಕ. ‘ಪದ್ಮರೇಖಾ ಮಸೂರಿ ಬಿಳಿ ಪೊನ್ನಿ ನೆಲ್ಲೂರು ವಂದನಾ ಸಿರಿ-1253–1 ಕೆ.ಎಂ.ಪಿ.-175 ಗಂಗಾವತಿ ಸೋನಾ ಹೇಮಾವತಿ ಸಣ್ಣ ಬಿಳಿ ಭತ್ತ ಜೀರಾ ಸಾಶಿ ಬೋಳಾ ಸಾಶಿ ಕರಿಬಾಸುಮತಿ-2 ಗೋವಿಂದ ಭೋಗಾ ಬಿಳಿ ಹೆಗ್ಲೆ ಭತ್ತದ ತಳಿಗಳನ್ನೂ ಬೆಳೆಯಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.