ಯಲ್ಲಾಪುರ: ತಾಲ್ಲೂಕಿನ ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಕ್ಕಳಗುಡ್ಡೆಯ ಮಹಾಬಲೇಶ್ವರ ಭಟ್ಟ ತಮ್ಮ ಮುಕ್ಕಾಲು ಎಕರೆ ಜಾಗದಲ್ಲಿ ವಿದೇಶಿ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
ಥೈವಾನ್ ದೇಶದಿಂದ ಬೀಜವನ್ನು ತರಿಸಿಕೊಂಡು ಕಿರಣ್, ಆರೋಹಿ, ವಿಶಾಲ್, ಕೃಷ್ಣ, ಸುಪ್ರಿತ್, ಅನಮೂಲ್ ತಳಿಯ ಕಲ್ಲಂಗಡಿಯನ್ನು ಬೆಳೆದಿದ್ದು ಅದರ ಜತೆ ಸವತೆ, ಮೊಗೆಕಾಯಿಯನ್ನು ಮಿಶ್ರಬೆಳೆಯಾಗಿ ಬೆಳೆದಿದ್ದಾರೆ. ಇವರ ಕಲ್ಲಂಗಡಿ ಹಣ್ಣುಗಳು ಗೋವಾ ಮತ್ತು ಕೇರಳದಲ್ಲಿ ಜನಪ್ರಿಯವಾಗಿದ್ದು ತಂಪುಪಾನೀಯ ತಯಾರಿಕೆಗೆ ಬಳಕೆಯಾಗುತ್ತಿವೆ. ಸ್ಥಳೀಯರೂ ತಮ್ಮ ತಮ್ಮ ಅಗತ್ಯಕ್ಕೆ ತಕ್ಕಂತೆ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ತೋಟಕ್ಕೆ ಹನಿ ನೀರಾವರಿ ಅಳವಡಿಸಲಾಗಿದ್ದು ಪ್ಲಾಸ್ಟಿಕ್ ಮಲ್ಚಿಂಗ್ ಮಾಡಿ ಗಿಡಗಳನ್ನು ನಾಟಿ ಮಾಡಲಾಗುತ್ತದೆ. ಸಂಪೂರ್ಣ ಸಾವಯವ ಪದ್ಧತಿ ಅನುಸರಿಸಲಾಗುತ್ತಿದ್ದು ಕೊಟ್ಟಿಗೆಯಲ್ಲಿ ದನ ಸಾಕಿ ಜೀವಾಮೃತ ಹಾಗೂ ಜೀವರಸ ಸಿದ್ಧಪಡಿಸಿ ಬೆಳೆಗಳಿಗೆ ನೀಡಲಾಗುತ್ತದೆ.
‘ನಾವು ಬೆಳೆಯುತ್ತಿರುವ ಕಲ್ಲಂಗಡಿ ಹಣ್ಣುಗಳು 4 ರಿಂದ 18 ಕೆ.ಜಿ.ವರೆಗೆ ತೂಗುತ್ತವೆ. ತೆಳ್ಳಗಿನ ಸಿಪ್ಪೆ ಹೊಂದಿರುವ ಇವು ಉಳಿದ ಕಲ್ಲಂಗಡಿ ಹಣ್ಣಿಗೆ ಹೋಲಿಸಿದರೆ ಹೆಚ್ಚಿನ ಸಿಹಿ ಮತ್ತು ನೀರಿನ ಅಂಶ ಹೊಂದಿವೆ. ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಕಲ್ಲಂಗಡಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಬೆಳೆಯಲಾಗುತ್ತಿದೆ’ ಎನ್ನುತ್ತಾರೆ ಮಹಾಬಲೇಶ್ವರ ಭಟ್ಟ.
‘ಒಂದು ಎಕರೆ ಪ್ರದೇಶಕ್ಕೆ ಕೂಲಿ ಸೇರಿ ₹2 ಲಕ್ಷ ಉತ್ಪಾದನಾ ವೆಚ್ಚವಿದೆ. ಬೆಳೆ ಕೈ ಹಿಡಿದರೆ ಅದೇ ಪ್ರಮಾಣದಲ್ಲಿ ಲಾಭವೂ ಇದೆ. ಕಲ್ಲಂಗಡಿ ಗಿಡಗಳ ಆರೈಕೆಗೆ ಒಬ್ಬರು ಸಾಕು. ಕೂಲಿ ಆಳುಗಳ ಮೇಲೆ ವರ್ಷವಿಡೀ ಅವಲಂಬನೆ ಬೇಕಾಗಿಲ್ಲ. ಪ್ರತಿ ದಿನ ಗಿಡಗಳಿಗೆ ನೀರುಣಿಸುವುದು, ಗಿಡಗಳನ್ನು ಪರೀಕ್ಷಿಸುವುದು ಅಗತ್ಯ’ ಎನ್ನುತ್ತಾರೆ ಅವರು.
ಉದ್ಯೋಗ ಬಿಟ್ಟು ಕೃಷಿ ಕಾಯಕ: ಬೆಂಗಳೂರಿನಲ್ಲಿ ಕಂಪ್ಯೂಟರ್ ರಿಪೇರಿ ಉದ್ಯೋಗ ಮಾಡುತ್ತಿದ್ದ ಅಂಕೋಲಾ ತಾಲ್ಲೂಕಿನ ಧೋರಣಗಿರಿ ನಾಗನಮನೆ ಮೂಲದ ಭಟ್ಟರು 2016ರಲ್ಲಿ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಕಬ್ಬನ್ನು ಬೆಳೆದು ನಂತರ ಕಬ್ಬಿಗೆ ಹೆಚ್ಚಿನ ಕೂಲಿಯಾಳುಗಳು ಬೇಕು ಎಂಬುದನ್ನು ಮನಗಂಡು ಕಲ್ಲಂಗಡಿಯತ್ತ ಹೊರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.