ADVERTISEMENT

ವರದಿ ಫಲಶ್ರುತಿ: ಮುಂಡಗೋಡಕ್ಕೆ 500 ಟನ್ ಯೂರಿಯಾ ಸರಬರಾಜಿಗೆ ಸೂಚನೆ

ಮುಂಡಗೋಡ: ಗೊಬ್ಬರ ದಾಸ್ತಾನು ಪರಿಶೀಲಿಸಿದ ಜಂಟಿ ಕೃಷಿ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 13:42 IST
Last Updated 25 ಜೂನ್ 2021, 13:42 IST
ಮುಂಡಗೋಡದ ಮಾರ್ಕೆಟಿಂಗ್ ಸೊಸೈಟಿ ಗೊಬ್ಬರ ದಾಸ್ತಾನು ಉಗ್ರಾಣಕ್ಕೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಭೇಟಿ ನೀಡಿ ಪರಿಶೀಲಿಸಿದರು
ಮುಂಡಗೋಡದ ಮಾರ್ಕೆಟಿಂಗ್ ಸೊಸೈಟಿ ಗೊಬ್ಬರ ದಾಸ್ತಾನು ಉಗ್ರಾಣಕ್ಕೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಭೇಟಿ ನೀಡಿ ಪರಿಶೀಲಿಸಿದರು   

ಮುಂಡಗೋಡ: ಯೂರಿಯಾ ಗೊಬ್ಬರಕ್ಕಾಗಿ ರೈತರು ಊರೂರು ಅಲೆಯುತ್ತಿರುವ ಹಿನ್ನೆಲೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಅವರು ಇಲ್ಲಿನ ಮಾರ್ಕೆಟಿಂಗ್ ಸೊಸೈಟಿ ಹಾಗೂ ಟಿ.ಎಸ್.ಎಸ್ ಉಗ್ರಾಣಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಇದ್ದು, ರೈತರು ಪಕ್ಕದ ತಾಲ್ಲೂಕುಗಳಿಂದಲೂ ತಂದು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಸೊಸೈಟಿಗಳಲ್ಲಿ ಇನ್ನೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದರಿಂದ ರೈತರು ಪರದಾಡುತ್ತಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಯ ಜೂನ್ 24ರ ಸಂಚಿಕೆಯಲ್ಲಿ ‘ಯೂರಿಯಾಕ್ಕಾಗಿ ಊರೂರು ಅಲೆದಾಟ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಲ್ಲೂಕಿನ ರೈತರ ಬೇಡಿಕೆ ಹಾಗೂ ಪೂರೈಕೆಯ ವಾಸ್ತವವನ್ನು ತಿಳಿದುಕೊಳ್ಳಲು ಅವರು ರಸಗೊಬ್ಬರ ಉಗ್ರಾಣಗಳಿಗೆ ಭೇಟಿ ನೀಡಿದರು. ಯೂರಿಯಾ ಗೊಬ್ಬರ ವಿತರಕರಿಂದ ಹೆಚ್ಚು ಗೊಬ್ಬರ ಖರೀದಿಸಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೊಸೈಟಿ ವ್ಯವಸ್ಥಾಪಕರಿಗೆ ಸೂಚಿಸಿದರು. ಅಲ್ಲದೇ ಕಂಪನಿಯ ಪ್ರತಿನಿಧಿಗಳೊಂದಿಗೆ ಸ್ವತಃ ಮಾತನಾಡಿ, ಎರಡು ದಿನಗಳಲ್ಲಿ 500 ಟನ್ ಯೂರಿಯಾ ಸರಬರಾಜು ಮಾಡುವಂತೆ ತಿಳಿಸಿದರು.

‘ಯೂರಿಯಾ ಗೊಬ್ಬರದ ಜೊತೆ ಲಿಂಕೇಜ್ ಆಗಿ ಇತರ ಗೊಬ್ಬರವನ್ನೂ ಕಂಪನಿಯವರು ನೀಡುತ್ತಿದ್ದಾರೆ. ಆದರೆ, ಇಲ್ಲಿನ ರೈತರು ಮಾತ್ರ ಯೂರಿಯಾ ಬಿಟ್ಟು ಬೇರೆ ಗೊಬ್ಬರ ಖರೀದಿಸುತ್ತಿಲ್ಲ. ಅದನ್ನು ಹೊರತುಪಡಿಸಿ ಎಲ್ಲ ಗೊಬ್ಬರದ ದಾಸ್ತಾನು ಇದೆ. ಯೂರಿಯಾ ಸರಬರಾಜಿಗೆ ಕಂಪನಿಯೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ’ ಎಂದು ಮಾರ್ಕೆಟಿಂಗ್ ಸೊಸೈಟಿ ವ್ಯವಸ್ಥಾಪಕ ಮಂಜುನಾಥ ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.