ಹೊನ್ನಾವರ: ರೋಗಬಾಧೆ, ವನ್ಯ ಪ್ರಾಣಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕೃಷಿ ಜಮೀನು ತುತ್ತಾಗಿದ್ದು, ತಾವು ಕಷ್ಟಪಟ್ಟು ಪೋಷಿಸಿದ ಬೆಳೆ ಕೈಗೆ ಸಿಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಹುತೇಕ ಎಲ್ಲೆಡೆಗಳಲ್ಲಿ ಕಾಡುಪ್ರಾಣಿಗಳ ಕಾಟ ವಿಪರೀತವಾಗಿದೆ. ಹಗಲು ಹೊತ್ತಿನಲ್ಲಿ ತೋಟಕ್ಕೆ ದಾಳಿಯಿಡುವ ಮಂಗ, ಕೆಂದಳಿಲು ಮೊದಲಾದ ಪ್ರಾಣಿಗಳು ಅಡಿಕೆ ಮಿಳ್ಳೆ, ಎಳೆ ತೆಂಗಿನಕಾಯಿಗಳನ್ನು ತಿಂದುಹಾಕುತ್ತಿವೆ. ರಾತ್ರಿ ವೇಳೆಯಲ್ಲಿ ನುಗ್ಗುವ ಹಂದಿಗಳು ಬಾಳೆ, ಅಡಿಕೆ ಸಸಿಗಳನ್ನು ಧ್ವಂಸ ಮಾಡುವುದು ಸಾಮಾನ್ಯವಾಗಿದೆ.
ಅತಿವೃಷ್ಟಿಯಿಂದಾಗಿ ಲೆಕ್ಕವಿಲ್ಲದಷ್ಟು ಅಡಿಕೆ ಕೊಳೆರೋಗಕ್ಕೆ ತುತ್ತಾಗಿದ್ದು, ಇದು ಸಾಲದೆಂಬಂತೆ ತೇವಾಂಶ ಹೆಚ್ಚಾದ ಪರಿಣಾಮವಾಗಿ ಫಂಗಸ್ ತಗುಲಿ ಅಡಿಕೆ ಗಿಡಗಳಲ್ಲಿ ಹಳದಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಕಂಡುಬಂದಿದೆ. ಹಿರೇಬೈಲ್, ಮಹಿಮೆ, ನಗರಬಸ್ತಿಕೇರಿ, ಚಿತ್ತಾರ ಹಾಗೂ ಜಲವಳ್ಳಿ ಭಾಗಗಳಲ್ಲಿ ಕನಿಷ್ಠ 102 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಮರಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ ಎಂದು ತೋಟಗಾರಿಕಾ ಇಲಾಖೆ ಅಂಕಿ-ಸಂಖ್ಯೆ ತಿಳಿಸುತ್ತದೆ.
ರೋಗ-ರುಜಿನ ಹಾಗೂ ಇತರ ಉಪಟಳಗಳ ಜೊತೆಗೆ ಈ ವರ್ಷ ಗಾಳಿ-ಮಳೆಗೆ ರೈತರ ತೋಟ ಪಟ್ಟಿಗಳಲ್ಲಿ ಸಾವಿರಾರು ಮರಗಳು ಮುರಿದು ಬಿದ್ದಿವೆ. ಕೆಲವು ಪ್ರದೇಶಗಳಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಅಡಿಕೆ, ತೆಂಗು ಮತ್ತಿತರ ಮರಗಳ ಚಂಡೆ ಮುರಿದು ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿರುವ ಲಕ್ಷಣ ಗೋಚರಿಸಿದ್ದು ಸಿಡಿಲಿನ ಹೊಡೆತದಿಂದ ಹೀಗಾಗಿದೆ ಎನ್ನುವ ಕೃಷಿಕರ ಊಹೆಗೆ ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ.
‘ಈ ಬಾರಿಯ ಮಳೆಗಾಲದಲ್ಲಿ ಇದುವರೆಗೆ ಕಂಡರಿಯದಷ್ಟು ವಿಪರೀತ ಕೊಳೆರೋಗ ಬಂದಿದ್ದು ನಮ್ಮ ಜಮೀನಿನಲ್ಲಿ ಕನಿಷ್ಠ 2 ಲಕ್ಷ ಅಡಿಕೆ ಹಾಳಾಗಿದೆ’ ಎಂದು ಗುರುದತ್ತ ಅಪಗಾಲ
ತಿಳಿಸಿದರು.
ಹಳದಿ ಎಲೆಚುಕ್ಕಿ ರೋಗ ಹಲವೆಡೆ ಕಂಡುಬಂದಿದ್ದು ನಿಯಂತ್ರಣಕ್ಕೆ ಉಚಿತವಾಗಿ ಔಷಧ ವಿತರಿಸಿರುವ ಜೊತೆಗೆ ರೈತರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ.–ಸೂರ್ಯಕಾಂತ ಕೆ.ವಿ., ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಹೊನ್ನಾವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.