ADVERTISEMENT

ಇಷ್ಟಾರ್ಥ ಕರುಣಿಸುವ ದುರ್ಗಾಪರಮೇಶ್ವರಿ

ಅಳ್ವೆಕೋಡಿಯ ನದಿ, ಸಮುದ್ರ ಸಂಗಮ ಪ್ರದೇಶದಲ್ಲಿರುವ ದೇವಾಲಯ

ಮೋಹನ ನಾಯ್ಕ
Published 30 ಜೂನ್ 2024, 6:16 IST
Last Updated 30 ಜೂನ್ 2024, 6:16 IST
ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಿ
ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಿ   

ಭಟ್ಕಳ: ತಾಲ್ಲೂಕಿನ ಅಳ್ವೆಕೋಡಿಯಲ್ಲಿ ನದಿ, ಸಮುದ್ರ ಸೇರುವ ಪ್ರದೇಶದಲ್ಲಿರುವ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನಕ್ಕೆ ಸುಮಾರು 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಭಕ್ತರು ಬೇಡಿದ್ದನ್ನು ಕರುಣಿಸುವ ದೇವಿ ಎಂಬ ಪ್ರಸಿದ್ಧಿಯನ್ನೂ ಹೊಂದಿದೆ.

ಈ ದೇವಸ್ಥಾನ ಪೌರಾಣಿಕವಾಗಿಯೂ ಕುತೂಹಲಕರ ಹಿನ್ನೆಲೆ ಹೊಂದಿದೆ. ವಾರ್ಷಿಕವಾಗಿ ಸಹಸ್ರಾರು ಭಕ್ತರನ್ನು ಸೆಳೆಯುವ ಈ ಧಾರ್ಮಿಕ ತಾಣ, ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿಯೂ ಒಂದೆನಿಸಿದೆ.

‘ಸುಮಾರು 300 ವರ್ಷಗಳ ಹಿಂದೆ ಕಾಡಿನ ನಡುವೆ ಅಳಿವೆಕೋಡಿಯಲ್ಲಿರುವ ಸಂಗಮ ಪ್ರದೇಶದಲ್ಲಿ ಒಂದು ಗೋವು ಪ್ರತಿ ನಿತ್ಯ ಕೇದಿಗೆಯ ಹಿಂಡಿನ ಮಧ್ಯದಲ್ಲಿ ಹೋಗಿ ಹಾಲು ಸುರಿಸಿ ಬರುತ್ತಿತ್ತು. ಮನೆಯವರಿಗೆ ಗೋವು ಹಾಲು ಕೊಡದಿರುವುದರಿಂದ ಅನುಮಾನ ಬಂದು ಒಂದು ದಿನ ಗೋವನ್ನು ಅನುಸರಿಸಿ ಹೋದಾಗ ವಿಸ್ಮಯ ಬೆಳಕಿಗೆ ಬಂದಿತ್ತು. ತಕ್ಷಣ ಊರಿನವರಿಗೆ ತಿಳಿಸಿ ಕಾಡಿನಲ್ಲಿ ಹೋಗಿ ನೋಡುವಾಗ ಮೃತ್ತಿಕೆಯಲ್ಲಿ ಸುಂದರವಾದ ದೇವರ ವಿಗ್ರಹವೊಂದು ಗೋಚರಿಸಿತು. ಊರಿನವರೆಲ್ಲ ಸೇರಿ ಮಣ್ಣನ್ನು ಸರಿಸಿ ನೋಡಿದಾಗ ಸುಂದರವಾದ ಸರ್ವಾಲಂಕೃತ ದುರ್ಗಾಪರಮೇಶ್ವರಿ ಮೂರ್ತಿ ಮರದ ಹಲಗೆಯೊಂದಕ್ಕೆ ಕಟ್ಟಿಕೊಂಡಿದ್ದು ಕಂಡು ಬಂದಿತ್ತು’ ಎಂದು ಇತಿಹಾಸದ ಕುರಿತು ವಿವರಿಸುತ್ತಾರೆ ದುರ್ಗಾಪರಮೇಶ್ವರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ.

ADVERTISEMENT

‘ಕೇದಿಗೆ ಹಿಂಡಿನಲ್ಲಿ ದೊರೆತ ವಿಗ್ರಹಕ್ಕೆ ಕೆಂಪುಕಲ್ಲಿನ ಪೀಠವನ್ನು ರಚಿಸಿ ಪ್ರತಿಷ್ಠಾಪಿಸಿದರು. ಕಾಲ ಕ್ರಮೇಣ ಹಂಚಿನ ಗುಡಿಯನ್ನು ಕಟ್ಟಿ ದೇವತಾ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾ ಬರಲಾಯಿತು. ದಿನ ಕಳೆದಂತೆ ದೇವಿಯ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭವ್ಯದೇಗುಲ ನಿರ್ಮಾಣ ಮಾಡಿ 1974ರಲ್ಲಿ ಪುನರ್ ಪ್ರತಿಷ್ಠಾಪನೆ ನೇರವೇರಿಸಲಾಯಿತು’ ಎಂದರು.

‘ಅಳ್ವೇಕೋಡಿ ದುರ್ಗಾಪರಮೇಶ್ವರಿ ತಾಲ್ಲೂಕಿನ ಮೀನುಗಾರರ ಪಾಲಿನ ಆರಾಧ್ಯ ದೇವಿ. ಮೀನುಗಾರರು ಮೀನುಗಾರಿಕೆಗೆ ಮುನ್ನ ದೇವಿಯಲ್ಲಿ ಪ್ರಾರ್ಥನೆ ಇಟ್ಟು ತೆರಳುವುದು ವಾಡಿಕೆ. ಹೇರಳವಾದ ಮೀನು ಸಿಕ್ಕು ಕೈತುಂಬಾ ಆದಾಯ ಕಂಡಾಗ ಒಂದು ಪಾಲು ದೇವಿಗೆ ಅರ್ಪಿಸುವವರು ಅಧಿಕ. ಹಾಗಾಗಿ ತಾಲ್ಲೂಕಿನಲ್ಲಿ ಮುರುಡೇಶ್ವರ ಹೊರತುಪಡಿಸಿ ಎರಡನೇ ಶ್ರೀಮಂತ ಕ್ಷೇತ್ರ ಅಳ್ವೇಕೋಡಿ ದುರ್ಗಾಪರಮೇಶ್ವರಿ. ಇಲ್ಲಿ ಹರಕೆ ಹೊತ್ತುಕೊಂಡವರು ಸಾವಿರ ಸಂಖ್ಯೆಯಲ್ಲಿ ದೇವಿಯ ಮಹಿಮೆಯನ್ನು ಬಣ್ಣಿಸುವವರಿದ್ದಾರೆ. ಇಲ್ಲಿನ ಬೆಳ್ಳಿತೊಟ್ಟಿಲು ಸೇವೆ ಪ್ರಸಿದ್ದವಾಗಿದೆ. ಮಕ್ಕಳಾದವರು ತಮ್ಮ ಮಗುವಿನ ನಾಮಕರಣವನ್ನು ದೇವಿಯ ಬೆಳ್ಳಿ ತೊಟ್ಟಿಲಲ್ಲಿ ಇರಿಸಿ ನಾಮಕರಣ ಆಚರಿಸುವುದು ಸಾಮಾನ್ಯವಾಗಿದೆ’ ಎಂದು ಹೇಳಿದರು.

ಪ್ರತಿ ಎರಡು ವರ್ಷಕ್ಕೊಮ್ಮೆ ಇಲ್ಲಿ ಮಾರಿ ಜಾತ್ರೆ ನಡೆಯುತ್ತದೆ. ಭಕ್ತರು ದೇವಿಗೆ ಕಷ್ಟಕಾಲದಲ್ಲಿ ಹರಕೆ ಹೊತ್ತಿರುವುದನ್ನು ಜಾತ್ರೆಯ ಸಮಯದಲ್ಲಿ ಒಪ್ಪಿಸುತ್ತಾರೆ. ಶ್ರಾವಣದಲ್ಲಿ ವರಮಹಾಲಕ್ಷ್ಮಿ ವ್ರತ ಹಾಗೂ ನವರಾತ್ರಿ ಕಾಲದಲ್ಲಿ ದೇವಿಯ ಆರಾಧನೆ ಇಲ್ಲಿನ ವಿಶೇಷವಾಗಿದೆ.

ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ

ಪೌರಾಣಿಕ ಹಿನ್ನೆಲೆಯ ದುರ್ಗಾಪರಮೇಶ್ವರ ದೇವಿ ದೇವಸ್ಥಾನ ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲೊಂದು ಎಂಬ ಖ್ಯಾತಿ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ದೇವಸ್ಥಾನ

15 ವರ್ಷಗಳ ಹಿಂದೆ ಗಂಭೀರ ಅನಾರೋಗ್ಯ ಸಮಸ್ಯೆ ಎದುರಾದಾಗ ಧೃತಿಗೆಡುವ ಸ್ಥಿತಿಯಲ್ಲಿದ್ದೆ. ವೈದ್ಯಕೀಯ ಚಿಕಿತ್ಸೆಯ ಜತೆಗೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಧೈರ್ಯವೂ ಬಂತು. ಗುಣಮುಖನೂ ಆದೆ.

- ತಿಮ್ಮಪ್ಪ ಹೊನ್ನಿಮನೆ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.