ಕಾರವಾರ: ‘ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್ ಗಟ್ಟಿಯಾಗಿಲ್ಲ. ಇಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಸಾಧ್ಯವೂ ಇಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಜೆ.ಡಿ.ಎಸ್.ನಿಂದ ಸ್ಪರ್ಧಿಸಲಾರೆ’ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘15 ದಿನಗಳಿಂದ ಕ್ಷೇತ್ರದ ಹಲವರನ್ನು ಭೇಟಿಯಾಗಿ ಅಭಿಪ್ರಾಯ ಕೇಳಿದ್ದೇನೆ. ವಿವಿಧ ಪಕ್ಷಗಳಲ್ಲಿರುವ ನನ್ನ ಹಿತೈಷಿಗಳನ್ನು ಆದಷ್ಟು ಬೇಗ ಭೇಟಿಯಾಗಿ ಚರ್ಚಿಸುವೆ. ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಣಯಕ್ಕೆ ಬರುತ್ತೇನೆ’ ಎಂದು ಹೇಳಿದರು.
‘ಬಿ.ಜೆ.ಪಿ.ಯಿಂದ ಮಹಿಳಾ ಕೋಟಾದ ಅಡಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ಕೊಡುವುದು ಖಚಿತವಾಗಿದೆ. ಕಾಂಗ್ರೆಸ್‌ನಿಂದ ಸತೀಶ ಸೈಲ್ ಅವರಿಗೆ ಟಿಕೆಟ್ ಕೊಡುತ್ತಾರೆ. ಕ್ಷೇತ್ರದಲ್ಲಿ ಜೆ.ಡಿ.ಎಸ್ ಗಟ್ಟಿಯಾಗಿರದ ಕಾರಣ ಅದರಿಂದ ಸ್ಪರ್ಧಿಸುವುದಿಲ್ಲ’ ಎಂದರು.
‘ನಾಲ್ಕು ವಿಧಾನಸಭಾ ಚುನಾವಣೆಗಳು, ಒಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮೂರರಲ್ಲಿ ಸೋತಿದ್ದರೂ ಪ್ರತಿ ಬಾರಿಯೂ ಪಡೆದ ಮತಗಳ ಸಂಖ್ಯೆ ಹೆಚ್ಚಿದೆ. ರಾಜಕೀಯದಿಂದ ನಾನು ದೂರವೇ ಇದ್ದರೂ ಕ್ಷೇತ್ರದ ಆಗುಹೋಗುಗಳು ಗಮನಕ್ಕಿವೆ. ನನ್ನ ಬೆಂಬಲಿಗರಿಗೆ ಅಗತ್ಯ ಕಾರ್ಯಗಳನ್ನು ಮಾಡಿದ್ದೇನೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಕಾರವಾರ ಕ್ಷೇತ್ರದಿಂದಲೇ ಆರಂಭವಾಯಿತು. ಈಚಿನ ನಾಲ್ಕು ವರ್ಷಗಳಲ್ಲಿ ಕ್ಷೇತ್ರಕ್ಕೆ ಒಂದೂ ಹೊಸ ಯೋಜನೆಗಳು ಮಂಜೂರಾಗಿಲ್ಲ. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ನಿರ್ಮಾಣಕ್ಕೆ ₹ 150 ಕೋಟಿ ಮಂಜೂರಾಯಿತು. ನಾನು ಅದನ್ನು ಮಾಡಿಸಿದರೂ ಶಂಕುಸ್ಥಾಪನೆ ವಿಳಂಬವಾಗಿ ಕಾಮಗಾರಿ ತಡವಾಗಿದೆ’ ಎಂದು ತಿಳಿಸಿದರು.
‘ದೇವನಾಗರಿಯೇ ಲಿಪಿ’:
‘ನಮ್ಮ ಮಾತೃಭಾಷೆ ಕೊಂಕಣಿಗೆ ದೇವನಾಗರಿಯೇ ಲಿಪಿ. ಹಾಗಾಗಿ ನಗರದ ರಸ್ತೆಗಳ ನಾಮಫಲಕಗಳಲ್ಲಿ ದೇವನಾಗರಿ ಲಿಪಿಯಲ್ಲಿಯೇ ಹೆಸರು ಬರೆಯಬೇಕು. ಅದೇರೀತಿ, ನಾವು ಕನ್ನಡವನ್ನು ತುಂಬ ಗೌರವಿಸುತ್ತೇವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.