ಶಿರಸಿ: 1300 ವರ್ಷಗಳ ಇತಿಹಾಸವಿರುವ ಇಲ್ಲಿನ ಸ್ವರ್ಣವಲ್ಲೀ ಮಹಾಸಂಸ್ಥಾನದ 55ನೇ ಯತಿಗಳಾಗಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಗುರುವಾರ ನಿಯೋಜನೆಗೊಂಡರು.
ಶಿಷ್ಯ ಸ್ವೀಕಾರ ಕಾರ್ಯಕ್ರಮದ ಅಂಗವಾಗಿ ನಿಯೋಜಿತ ಯತಿಗಳಿಗೆ ಬೆಳಗ್ಗೆ ಶಾಲ್ಮಲಾ ನದಿಯಲ್ಲಿ ಜಲಾಶಯಗಮನ, ಸಾವಿತ್ರಿಪ್ರವೇಶ, ಪ್ರೇಷೋಚ್ಛಾರಣೆ ನಂತರ ಕಾಷಾಯ ವಸ್ತ್ರ ಧಾರಣೆ, ಮತ್ತ ಪ್ರಣವಮಹಾ ವಾಕ್ಕೋಪದೇಶ ನಡೆಯಿತು.
ಕಾಂಚಿ ಕಾಮಕೋಟಿ ಪೀಠಾಧೀಶರನ್ನೂ ಒಳಗೊಂಡು ರಾಜ್ಯದ ವಿವಿಧ ಭಾಗದ ಯತಿಗಳ ಸಮ್ಮುಖದಲ್ಲಿ ಸ್ವರ್ಣವಲ್ಲೀ ಪೀಠದ 54ನೇ ಯತಿಗಳಾದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ನೂತನ ಯತಿಗಳಿಗೆ ಆನಂದ ಭೋದೇಂದ್ರ ಸರಸ್ವತೀ ಸ್ವಾಮೀಜಿ ಎಂದು ಮೂರು ಬಾರಿ ಘೋಷಿಸುವ ಮೂಲಕ ನಾಮಕರಣ ಮಾಡಿದರು.
ನೆರೆದ ಮೂವತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಹರ್ಷೋದ್ಘಾರದ ಮೂಲಕ ಸ್ವಾಗತಿಸಿದರು. ನಂತರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪರ್ಯಂಕಶೌಚ, ಮಠದಲ್ಲಿ ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.