ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ; ಅಂಗನವಾಡಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:54 IST
Last Updated 10 ಜುಲೈ 2024, 15:54 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರವಾರದಲ್ಲಿ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರವಾರದಲ್ಲಿ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು   

ಕಾರವಾರ: ಕನಿಷ್ಠ ವೇತನ ನಿಗದಿಪಡಿಸುವುದೂ ಸೇರಿದಂತೆ 16 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಮಾಲಾದೇವಿ ಮೈದಾನದಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಕ್ತಾಯಗೊಂಡಿತು. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೊಷಣೆ ಕೂಗಲಾಯಿತು.

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಪಡಿಸುವ ಜತೆಗೆ ಸಾಮಾಜಿಕ ಭದ್ರತೆ ಸೌಲಭ್ಯ ಒದಗಿಸಬೇಕು. 45 ಮತ್ತು 46ನೇ ರಾಷ್ಟ್ರೀಯ ಕಾರ್ಮಿಕ ಸಮಾವೇಶಗಳ ಶಿಫಾರಸು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಲಾಯಿತು.

ADVERTISEMENT

‘ಪರಿಣಾಮಕಾರಿ ಕೆಲಸದ ಸಲುವಾಗಿ ಹಳೆಯ ಮೊಬೈಲ್‍ಗಳನ್ನು ಹಿಂಪಡೆದು ಹೊಸದಾಗಿ ಉತ್ತಮ ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್‍ಗಳನ್ನು ಕಾರ್ಯಕರ್ತೆಯರಿಗೆ ಒದಗಿಸಬೇಕು. ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ದೂರವಾಣಿ ಸಂಖ್ಯೆ ಜೋಡಿಸುವುದು ಕಡ್ಡಾಯ ಎಂಬ ಆದೇಶ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಯಮುನಾ ಗಾಂವಕರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರಮುಖರಾದ ತಾರಾ ನಾಯ್ಕ, ಮಾಯಾ ಕಾಣೇಕರ್, ಮಂಜುಳಾ ಕಾಣಕೋಣಕರ್ ಇದ್ದರು. 

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ಶಿರಸಿ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು

₹1 ಸಾವಿರ ಗೌರವಧನ ಬಿಡುಗಡೆಗೆ ಆಗ್ರಹ

ಶಿರಸಿ: ಅಂಗನವಾಡಿ ನೌಕರರಿಗೆ ಹೊಸ ಮೊಬೈಲ್ ನೀಡಬೇಕು ಬಜೆಟ್‌ನಲ್ಲಿ ಘೋಷಿಸಿದ ₹1 ಸಾವಿರ ಗೌರವಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಸಂಘಟನೆಯ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಗ್ಯಾಚುಟಿ ನೀಡಲು ಕ್ರಮವಹಿಸಬೇಕು. ಇತರ ಇಲಾಖೆಗಳ ಕೆಲಸ ಮಾಡಿಸಬಾರದು. ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒಕ್ಕೋರಲಾಗಿ ಆಗ್ರಹಿಸಿದರು.  ಪ್ರಭಾರಿ ಸಿಡಿಪಿಒ ವೀಣಾ ವೇರ್ಣೆಕರ್ ಅವರು ಮನವಿ ಸ್ವೀಕರಿಸಿದರು. ಈ ವೇಳೆ ಸಂಘದ ಪ್ರಮುಖರಾದ ವಿದ್ಯಾ ವೈದ್ಯ ಲೀಲಾವತಿ ಹೆಗಡೆ ಸುಮಂಗಲಾ ವಾಣಿ ಸಿಐಟಿಯುನ ನಾಗಪ್ಪ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.