ಕಾರವಾರ: ದೇಶದಾದ್ಯಂತ 21ನೇ ಜಾನುವಾರು ಗಣತಿಗೆ ಚಾಲನೆ ದೊರೆತಿದ್ದರೂ ಜಿಲ್ಲೆಯಲ್ಲಿ ಗಣತಿ ಪ್ರಕ್ರಿಯೆ ನಿಗದಿಗಿಂತ ಒಂದೂವರೆ ತಿಂಗಳು ತಡವಾಗಿ ಆರಂಭಗೊಳ್ಳಲಿದೆ.
ಅ.25 ರಿಂದ ಜಾನುವಾರು ಜನಗಣತಿ ಆರಂಭಗೊಂಡಿದೆ. ಇದಕ್ಕೂ ಮುನ್ನ ಸೆ.1 ರಿಂದ ಗಣತಿ ಆರಂಭಿಸಲು ನಿರ್ಧರಿಸಲಾಗಿತ್ತು. ಗಣತಿ ಮಾಹಿತಿಯ ದತ್ತಾಂಶ ಸಂಗ್ರಹಿಸಲು ಕೇಂದ್ರ ಪಶು ಇಲಾಖೆ ರೂಪಿಸಿದ ‘ಲೈವ್‍ಸ್ಟಾಕ್ ಸೆನ್ಸಸ್’ನಲ್ಲಿ ಎದುರಾದ ತಾಂತ್ರಿಕ ಅಡಚಣೆಯಿಂದ ಗಣತಿ ಆರಂಭಿಸಲು ವಿಳಂಬವಾಗಿದೆ.
ಆದರೂ, ಜಿಲ್ಲೆಯಲ್ಲಿ ಜಾನುವಾರು ಗಣತಿ ಈವರೆಗೆ ಆರಂಭಗೊಂಡಿಲ್ಲ. 10 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿರುವ ಜಿಲ್ಲೆಯಲ್ಲಿ ಗಣತಿ ಆರಂಭಗೊಂಡು ಒಂದೂವರೆ ತಿಂಗಳ ಬಳಿಕ ಪ್ರಕ್ರಿಯೆ ಆರಂಭಗೊಳ್ಳಲಿದೆ. ಗಣತಿಗೆ ಪಶು ಸಂಗೋಪನಾ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
‘ಕಾಲುಬಾಯಿ ಲಸಿಕೆ ಅಭಿಯಾನ ಜಾರಿಯಲ್ಲಿರುವ ಕಾರಣ ಜಾನುವಾರು ಗಣತಿ ಆರಂಭಿಸಲು ತಡವಾಗಿದೆ. ಡಿ.1ರಿಂದ ಗಣತಿ ಕಾರ್ಯ ಆರಂಭಿಸಲಾಗುತ್ತದೆ. ಇದಕ್ಕಾಗಿ 131 ಗಣತಿದಾರರು, 25 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅವರಿಗೆ ಮೂರು ಜನ ಮಾಸ್ಟರ್ ಟ್ರೇನರ್ ಗಣತಿ ಕಾರ್ಯದ ಕುರಿತು ತರಬೇತಿ ನೀಡಿದ್ದಾರೆ’ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಮೋಹನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅ.25 ರಿಂದ 2025ರ ಫೆ.28ರ ಅವಧಿಯೊಳಗೆ ಗಣತಿ ಕಾರ್ಯ ಪೂರ್ಣಗೊಳಿಸಲು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಗಡುವು ನೀಡಿದೆ. ಜಿಲ್ಲೆಯಲ್ಲಿ ಮೂರು ತಿಂಗಳ ಒಳಗೆ ಗಣತಿ ನಡೆಸಬಹುದಾಗಿದ್ದು, ಫೆಬ್ರುವರಿ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದೂ ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ 1,249 ಗ್ರಾಮಗಳು, ನಗರ ವ್ಯಾಪ್ತಿಯ 298 ವಾರ್ಡ್‌ಗಳಿಂದ ಒಟ್ಟು 4,03,869 ಮನೆಗಳಿವೆ. ಗಣತಿ ವೇಳೆ ಪ್ರತಿ ಮನೆಗೆ ಭೇಟಿ ನೀಡಿ ಗಣತಿದಾರರು ಜಾನುವಾರುಗಳ ಮಾಹಿತಿ ಕಲೆ ಹಾಕಲಿದ್ದಾರೆ. ಜತೆಗೆ ಧಾರ್ಮಿಕ ಕೇಂದ್ರಗಳಿಗೂ ತೆರಳಿ ಅಲ್ಲಿ ಸಲಹುತ್ತಿರುವ ಪ್ರಾಣಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಿದ್ದಾರೆ. ಡಿಜಿಟಲ್ ಗಣತಿ ಆಗಿರುವ ಕಾರಣಕ್ಕೆ ನಿಖರ ಮಾಹಿತಿಯನ್ನೇ ಆ್ಯಪ್‍ನಲ್ಲಿ ದಾಖಲಿಸಬೇಕಾಗುತ್ತದೆ. ಈ ಮಾಹಿತಿ ಜಾನುವಾರುಗಳಿಗೆ ಸಂಬಂಧಿಸಿದ ಯೋಜನೆ ಜಾರಿಗೆ ಭವಿಷ್ಯದಲ್ಲಿ ನೆರವಾಗುತ್ತದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.