ಕಾರವಾರ: ಬನವಾಸಿಯಲ್ಲಿ ಮಂಗಳವಾರ (ಫೆ.28) ಕದಂಬೋತ್ಸವಕ್ಕೆ ಚಾಲನೆ ಸಿಗಲಿದ್ದು, ಉತ್ಸವದ ವೇದಿಕೆಯಲ್ಲಿ ಪ್ರದಾನ ಆಗಲಿರುವ 'ಪಂಪ ಪ್ರಶಸ್ತಿ'ಯನ್ನು ಸೋಮವಾರ ಘೋಷಿಸಲಾಗಿದೆ.
2020-21, 2021-22 ಹಾಗೂ 2022-23ನೇ ಸಾಲಿಗೆ ಏಕಕಾಲಕ್ಕೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
2020-21ನೇ ಸಾಲಿಗೆ ಮೈಸೂರಿನವರಾದ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್, 2021-22ನೇ ಸಾಲಿಗೆ ಬರಹಗಾರ ಬೆಂಗಳೂರಿನ ಡಾ.ಬಾಬು ಕೃಷ್ಣಮೂರ್ತಿ ಹಾಗೂ 2022-23ನೇ ಸಾಲಿಗೆ ಬರಹಗಾರ, ಪತ್ರಕರ್ತ ಬೆಂಗಳೂರಿನ ಡಾ.ಎಸ್.ಆರ್.ರಾಮಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರತಿ ಬಾರಿ ಕದಂಬೋತ್ಸವದಲ್ಲಿ ಪ್ರಶಸ್ತಿ ನೀಡುವ ಸಂಪ್ರದಾಯವಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಉತ್ಸವ ನಡೆದಿರಲಿಲ್ಲ.
'ಉತ್ಸವಕ್ಕಿಂತ ಕನಿಷ್ಠ ವಾರ ಮೊದಲು ಪ್ರಶಸ್ತಿ ಘೋಷಿಸಬೇಕಿತ್ತು. ಪುರಸ್ಕೃತರನ್ನು ಬನವಾಸಿಯಲ್ಲಿ ಅದ್ದೂರಿಯಾಗಿ ಗೌರವಿಸುವ ವಾಡಿಕೆ ಇತ್ತು. ಆದರೆ ಕೊನೆಕ್ಷಣದಲ್ಲಿ ಪ್ರಶಸ್ತಿ ಘೋಷಿಸಿದ್ದು ಸರಿಯಲ್ಲ' ಎನ್ನುತ್ತಾರೆ ಬನವಾಸಿ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಉದಯಕುಮಾರ ಕಾನಳ್ಳಿ ಹೇಳಿದರು.
'ಪ್ರಶಸ್ತಿ ಪ್ರದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪುರಸ್ಕೃತರನ್ನು ಕರೆತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ' ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.