ದಾಂಡೇಲಿ: ‘ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆಯಿಡುವ ಮತ್ತು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಲು ಸ್ವ ಇಚ್ಛೆಯಿಂದ ಮುಂದೆ ಬರಬೇಕು’ ಎಂದು ಕಾರವಾರ ಲೋಕಾಯುಕ್ತ ಅಧಿಕ್ಷಕ ಕುಮಾರಚಂದ್ರ ಹೇಳಿದರು.
ದಾಂಡೇಲಿ ನಗರಸಭೆ ಸಭಾಭವನದಲ್ಲಿ ಬುಧವಾರ ನಡೆದ ಸಾರ್ವಜನಿಕರಿಗೆ ಮಾಹಿತಿ ಮತ್ತು ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ‘ಸಾರ್ವಜನಿಕರಿಗಾಗಿ ನಡೆದ ಈ ಸಭೆಯಲ್ಲಿ ಅಧಿಕಾರಿಗಳನ್ನು ಬಿಟ್ಟು ಬೆರಳೆಣಿಕೆಯಷ್ಟು ಜನರು ಮಾತ್ರ ದೂರು ನೀಡಲು ಬಂದಿದ್ದಾರೆ. ಇದರ ಅರ್ಥ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದಲ್ಲ. ಸಾರ್ವಜನಿಕರು ನಿರಾಸಕ್ತಿ ಕಂಡುಬರುತ್ತಿದೆ’ ಎಂದರು.
‘ದೂರು ಸ್ವೀಕಾರಗೊಂಡ ನಂತರ ಒಂದು ಅಥವಾ ಎರಡು ವರ್ಷಗಳಲ್ಲಿ ಅಥವಾ ನಿವೃತ್ತಿಯ ನಂತರವು ವಿಚಾರಣೆ ನಡೆಯಲಿದೆ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.
‘ಅರ್ಜಿಗಳ ವಿಲೇವಾರಿಗೆ ವಿಳಂಬ, ಸರ್ಕಾರಿ ಹಣ ದುರುಪಯೋಗ, ಕರ್ತವ್ಯ ಲೋಪ, ಕಟ್ಟಡ, ರಸ್ತೆ ಕಳಪೆ ಕಾಮಗಾರಿ, ಕಾನೂನು ಬಾಹಿರವಾಗಿ ಕೆಲಸ ಮಾಡಿ ಕೊಟ್ಟು ಅನಂತರ ಕಾಣಿಕೆ ಪಡೆಯುವುದು ಅಥವಾ ಮೊದಲೇ ಪಡೆಯುವುದು, ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಹಾಗೂ ಕಸ ವಿಲೇವಾರಿಗೆ ನಿರ್ಲಕ್ಷ್ಯ ಮಾಡುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ’ ಎಂದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ 7 ದೂರು ಅರ್ಜಿಗಳನ್ನು ಸ್ವೀಕರಿಸಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಬಗೆಹರಿಸಲು ನಿರ್ದೇಶನ ನೀಡಲಾಯಿತು.
ಕುಮಾರಚಂದ್ರ ಅಧಿಕ್ಷಕರು, ಲೋಕಾಯುಕ್ತ ಕಾರವಾರ, ವಿನಾಯಕ ಬಿಲ್ಲವ ಪೊಲೀಸ್ ನಿರೀಕ್ಷಕರು, ಪ್ರಸಾದ ಫಣಿಕರ್ ಪೊಲೀಸ್ ನಿರೀಕ್ಷಕರು, ತಹಶೀಲ್ದಾರ್ ಶೈಲೇಶ್ ಪರಮಾನಂದ ಹಾಗೂ ಲೋಕಾಯುಕ್ತ ಸಿಬ್ಬಂದಿ ಮತ್ತು ದಾಂಡೇಲಿ ತಾಲ್ಲೂಕಿನ ಸರಕಾರಿ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.