ಭಟ್ಕಳ: ಹೊಸದಾಗಿ ಆಯ್ಕೆಗೊಂಡ ಭಟ್ಕಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ ನೌಕರರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಿದ ಸರ್ಕಾರಿ ನೌಕರರು ಗೊಂದಲವಿಲ್ಲದೇ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆಯಾಗಲು ಸಹಕರಿಸಿದಕ್ಕೆ ಧನ್ಯವಾದ ಅರ್ಪಿಸಿದರು.
ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತನಾಡಿದ ನೂತನ ಅಧ್ಯಕ್ಷ ಎಂ.ಎನ್.ನಾಯ್ಕ, ‘ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕೆಲಸದಿಂದ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನೂರು– ಇನ್ನೂರು ಮಕ್ಕಳು ಇರುವ ಕಡೆ ಮಹಿಳಾ ಶಿಕ್ಷಕರಿದ್ದರೆ ಅವರಿಗೆ ಇದು ಕಷ್ಟವಾಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.
ಈ ಹಿಂದೆ ಶಿಕ್ಷಕರು ಶಾಲೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಕೋರಿಕೊಂಡಾಗ ಸಚಿವರೇ ಸರ್ಕಾರ ಗಮನಸೆಳೆದು ಉಚಿತ ವಿದ್ಯುತ್ ಪೂರೈಸಿದ ಬಗ್ಗೆ ಧನ್ಯವಾದ ಅರ್ಪಿಸಿದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ‘ನೌಕರರು ಜನರಿಗೆ ತೊಂದರೆ ನೀಡದೆ ಕೆಲಸ ಮಾಡಿಕೊಂಡು ಹೋಗಿ. ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ’ ಎಂದರು.
ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ ನಾಯ್ಕ, ಕೃಷ್ಣಕಾಂತ ನಾಯ್ಕ, ಕುಮಾರ ನಾಯ್ಕ, ಸುಶೀಲಾ ಮೊಗೇರ, ವಿವಿಧ ಇಲಾಖೆಯ ನೌಕರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.