ADVERTISEMENT

ಶಿರಸಿ | ಮಳೆಗೆ ಮುರಿದು ಬಿದ್ದಿದ್ದ ಅಡಿಕೆ ಮರಗಳು: ನಷ್ಟ ಗರಿಷ್ಠ; ಪರಿಹಾರ ಕನಿಷ್ಠ

ರಾಜೇಂದ್ರ ಹೆಗಡೆ
Published 17 ನವೆಂಬರ್ 2024, 4:31 IST
Last Updated 17 ನವೆಂಬರ್ 2024, 4:31 IST
<div class="paragraphs"><p>ಶಿರಸಿಯಲ್ಲಿ ಜೂನ್–ಜುಲೈ ತಿಂಗಳಲ್ಲಿನ ಮಳೆಗಾಳಿಗೆ ನೆಲಕ್ಕೊರಗಿರುವ ಅಡಿಕೆ ಮರಗಳು</p></div>

ಶಿರಸಿಯಲ್ಲಿ ಜೂನ್–ಜುಲೈ ತಿಂಗಳಲ್ಲಿನ ಮಳೆಗಾಳಿಗೆ ನೆಲಕ್ಕೊರಗಿರುವ ಅಡಿಕೆ ಮರಗಳು

   

ಶಿರಸಿ: ಕಳೆದ ಮಳೆಗಾಲದಲ್ಲಿ ತಾಲ್ಲೂಕಿನ ವಿವಿಧೆಡೆ ಗಾಳಿ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಸಂಖ್ಯ ಅಡಿಕೆ ಮರಗಳು ಮುರಿದು ಬಿದ್ದಿದ್ದರೂ ಪರಿಹಾರ ರೂಪದಲ್ಲಿ ಬಂದ ಮೊತ್ತ ಕೇವಲ ₹68 ಸಾವಿರ ಮಾತ್ರ! 

ಕಳೆದ ಜುಲೈ ತಿಂಗಳಲ್ಲಿ ಮಳೆಗಾಲ ಜೋರಾದಾಗ ಗಾಳಿಯ ಅಬ್ಬರವೂ ಜೋರಾಗಿತ್ತು. ಈ ವೇಳೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿದ್ದವು. ಇನ್ನು ಕೆಲವೆಡೆ ನೀರಿನ ಪ್ರವಾಹದಿಂದ ತೋಟ ಕೊಚ್ಚಿಹೋಗಿತ್ತು. ಅಡಿಕೆ ಮರ ಮುರಿದು ಹಾನಿಯಾದ ಕಡೆಗೆಲ್ಲ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆರಳಿ ಹಾನಿಯ ಸಮೀಕ್ಷೆ ನಡೆಸಿದ್ದರು. ಗಂಭೀರ ಹಾನಿ ಎನಿಸಿದ್ದನ್ನು ಪ್ರಕರಣವನ್ನಾಗಿ ದಾಖಲಿಸಿದ್ದರು. ಈಗ ತಹಶೀಲ್ದಾರ್ ಕಾರ್ಯಾಲಯದಿಂದ ಹಿಂಬರಹ ಬಂದಿದ್ದು, ಬಹುತೇಕ ರೈತರು ಪರಿಹಾರ ವಂಚಿತರಾಗಿದ್ದಾರೆ. 

ADVERTISEMENT

 ಅಡಿಕೆ ಮರಗಳು ಮುರಿದು ಬಿದ್ದಾಗ ಉಳಿದ ಅಡಿಕೆ ಮರಗಳಿಗೂ ಹಾನಿ ಉಂಟಾಗುತ್ತದೆ. ಆದರೆ, ಅಡಿಕೆ ಬೆಳೆಗಾರರು ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಮಾಣ ಕಡಿಮೆ. ಆದರೆ ಈ ವರ್ಷ ಅನೇಕ ರೈತರ ಅಡಿಕೆ ತೋಟದಲ್ಲಿ ಸಾಲು ಸಾಲು ಅಡಿಕೆ ಮರಗಳು ಮುರಿದು ಬಿದ್ದು, ಬೆಳೆಯ ಪ್ರಮಾಣವೇ ಕಡಿಮೆ ಆಗುವ ಸ್ಥಿತಿ ಉಂಟಾಗಿತ್ತು. ಅಲ್ಲದೇ ಕೊಳೆ ರೋಗದಿಂದಾಗಿ ಹಾನಿ ಅನುಭವಿಸಿದ ಕಾರಣ ಮುರಿದುಬಿದ್ದ ಮರಗಳಿಗೆ ಪರಿಹಾರ ಸಿಕ್ಕರೆ ಸಿಗಲಿ ಎಂಬ ಆಶಯದೊಂದಿಗೆ ರೈತರು ಅರ್ಜಿ ಸಲ್ಲಿಸಿದ್ದರು. ರೈತರ ಅರ್ಜಿ  ಆಧರಿಸಿ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಪರಿಹಾರ ಆ್ಯಪ್ ಗೆ ದಾಖಲಿಸಿದ್ದರು. ಆದರೆ, ಪರಿಹಾರಕ್ಕೆ ನಿಗದಿಪಡಿಸಲಾದ ಮಾನದಂಡ ಅನೇಕ ರೈತರನ್ನು ಪರಿಹಾರದಿಂದ ವಂಚಿಸುವಂತೆ ಮಾಡಿದೆ. 

ಒಂದು ತೋಟದಲ್ಲಿ ಪ್ರತಿ ಎಕರೆಗೆ 540 ಅಡಿಕೆ ಮರಗಳಿರಲಿದ್ದು, ಅವುಗಳಲ್ಲಿ ಶೇ 33ರಷ್ಟು ಮರಗಳು ಮುರಿದಿರಬೇಕು. ಅಂದರೆ, ಒಂದು ಎಕರೆಗೆ 180 ಮರಗಳು ಮುರಿದರಷ್ಟೇ ಪರಿಹಾರಕ್ಕೆ ಪರಿಗಣನೆಯಾಗುತ್ತದೆ. ಹೀಗಾಗಿ, ಎರಡು ಅಥವಾ ಮೂರು ಎಕರೆ ಹೊಂದಿದ ರೈತರ ತೋಟದಲ್ಲಿ ನೂರಾರು ಮರಗಳು ಮುರಿದುಬಿದ್ದಿದ್ದರೂ ಅದು ಶೇ 33ಕ್ಕಿಂತ ಕಡಿಮೆ ಎಂದು ಪರಿಗಣಿತವಾಗಿವೆ. 

‘ಗಾಳಿ– ಮಳೆಯಿಂದ ಅಡಿಕೆ ಮರ ಮುರಿದುಬಿದ್ದಿದ್ದರೂ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದವರು ಕೇವಲ 39 ರೈತರು ಮಾತ್ರ. ಇವರಲ್ಲಿ 10 ಗುಂಟೆ ಕ್ಷೇತ್ರಕ್ಕಿಂತ ಕಡಿಮೆ ಅಡಿಕೆ ತೋಟ ಹೊಂದಿದ ಕೇವಲ 18 ರೈತರಿಗೆ ಮಾತ್ರ ಪರಿಹಾರ ಲಭ್ಯವಾಗಿದೆ. ಒಟ್ಟೂ 3.8 ಹೆಕ್ಟೇರ್ ಅಡಿಕೆ ತೋಟದಲ್ಲಿ ಮಾತ್ರ ಶೇ 33ಕ್ಕಿಂತ  ಅಧಿಕ ಮರ ಮುರಿದು ಹಾನಿ ಎಂದು ಪರಿಹಾರಕ್ಕೆ ಪರಿಗಣಿಸಲಾಗಿದ್ದು, ಒಟ್ಟೂ ₹68 ಸಾವಿರ ಪರಿಹಾರ ನೀಡಲಾಗಿದೆ. ಅರ್ಜಿ ನೀಡಿ, ಅಧಿಕಾರಿಗಳು ಬಂದು ಪರಿಶೀಲಿಸಿದ್ದರೂ ಉಳಿದ 21 ರೈತರಿಗೆ ಯಾವುದೇ ರೀತಿಯ ಪರಿಹಾರ ಲಭಿಸದೇ ನಿರಾಶರಾಗಿದ್ದಾರೆ’ ಎನ್ನುತ್ತಾರೆ ಬೆಳೆಗಾರ ರಾಮನಾಥ ಹೆಗಡೆ. 

‘ಕಳೆದ ಮಳೆಗಾಲದಲ್ಲಿ ಗಾಳಿ ಮಳೆಯಿಂದ ಅಡಕೆ ಮರ ಮುರಿದು ಹಾನಿ ಅನುಭವಿಸಿದ್ದವರಿಗೆ ಈಗ ತಹಶೀಲ್ದಾರ್ ಕಾರ್ಯಾಲಯದಿಂದ ಪತ್ರ ಬರುತ್ತಿದೆ. ನಿಮ್ಮ ತೋಟದಲ್ಲಾದ ಹಾನಿ ಪರಿಹಾರಕ್ಕೆ ನಿಗದಿಪಡಿಸಿದ ಮಾನದಂಡಕ್ಕೆ ಅನುಗುಣವಾಗಿರದ ಕಾರಣ ಯಾವುದೇ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ, ಈ ಪ್ರಕರಣವನ್ನು ವಿಲೆಗೆ ತಂದು ಈ ಹಂತದಲ್ಲಿ ಮುಕ್ತಾಯಗೊಳಿಸಲಾಗಿದೆ' ಎಂದು ಅರ್ಜಿಯ ಹಿಂಬರಹದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಹೇಳಿದರು. 

ಶೇ 33ಕ್ಕಿಂತ ಜಾಸ್ತಿ ಹಾನಿ ಆಗಬೇಕು ಎಂಬ ನಿಯಮ ಇರುವುದು ಪರಿಹಾರ ನೀಡಲು ತೊಡಕಾಗಿದೆ. ಅಡಿಕೆ ತೋಟಕ್ಕೆ ಈ ನಿಯಮದಲ್ಲಿ ವಿನಾಯಿತಿ ಕೊಡಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತೇನೆ
-ಭೀಮಣ್ಣ ನಾಯ್ಕ,ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.