ಶಿರಸಿ: ಸದಸ್ಯರು ಹಾಗೂ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯು ಗುರುವಾರದಿಂದ (ಏ.16) ಅಡಿಕೆ ನೇರ ಖರೀದಿ ಪ್ರಾರಂಭಿಸಲು ಮುಂದಾಗಿದೆ.
ಲಾಕ್‌ಡೌನ್ ಇರುವ ಕಾರಣ ವ್ಯಾಪಾರ ವಹಿವಾಟು ಸ್ಥಗಿತಗೊಂಡು, ರೈತರು ಅಡಿಕೆ ಮಾರಾಟಮಾಡಲಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಡಿಕೆ ಮಾರುಕಟ್ಟೆಯ ಭವಿಷ್ಯದ ದೃಷ್ಟಿಯಿಂದ ಟಿಎಸ್‌ಎಸ್ ಮಹತ್ವ ಹೆಜ್ಜೆಯಿಟ್ಟಿದೆ. ನೇರ ಖರೀದಿಯಲ್ಲಿ ಪ್ರತಿದಿನ 30 ರೈತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರೈತರು ಮುಂಚಿತವಾಗಿ 08384 -236107 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಹೆಸರನ್ನು ನೋಂದಾಯಿಸಿ, ಅನುಮತಿಯನ್ನು ಪಡೆದುಕೊಂಡು ಅಡಿಕೆಯನ್ನು ಮಾರಾಟಕ್ಕೆ ತರಬಹುದು. ಅಂತಹವರ ಅಡಿಕೆಯನ್ನು ಮಾತ್ರ ಖರೀದಿಸಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
’ನೋಂದಾಯಿತ ಸದಸ್ಯರಿಗೆ ಅಡಿಕೆಯನ್ನು ತರಲು ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು. ಸಂಘಕ್ಕೆ ಅಡಿಕೆಯನ್ನು ತರುವಾಗ ಸ್ಥಳೀಯ ಅನುಮತಿಪತ್ರ ಅಥವಾ ಹಿಡುವಳಿ ಪ್ರತಿಯನ್ನು ವಾಹನದಲ್ಲಿ ಇಟ್ಟುಕೊಂಡು ಬರಬೇಕು. ವಿಕ್ರಿ ಸಮಯದಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸಿರಬೇಕು. ಸಂಘದಲ್ಲಿ ಶಿಲ್ಕು ಹೊಂದಿರುವ ಸದಸ್ಯರು ಹಾಗೂ ಈಗಾಗಲೇ ವಿಕ್ರಿಗಾಗಿ ಅಡಿಕೆಯನ್ನು ತಂದಿಟ್ಟಿರುವ ಸದಸ್ಯರು ನೇರ ಖರೀದಿಗೆ ಹಸರು ನೋಂದಾಯಿಸುವ ಅವಕಾಶ ಹೊಂದಿದ್ದಾರೆ. ಮೊದಲನೇ ದರ್ಜೆಯ ಅಡಿಕೆಯನ್ನು ಮಾತ್ರ ಖರೀದಿಸಲಾಗುವುದು.
ಹಳ್ಳಿಗಳ ಮಟ್ಟದಲ್ಲಿ ಅಡಿಕೆ ನೇರಖರೀದಿ:
ಹಳ್ಳಿಗಳಲ್ಲಿ ನೇರ ಖರೀದಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕನಿಷ್ಠ 10 ಜನ ರೈತರು ಒಪ್ಪಿಗೆ ಸೂಚಿಸುವ ಸ್ಥಳದಲ್ಲಿ ಬಂದು ಅಡಿಕೆಯನ್ನು ನೇರವಾಗಿ ಖರೀದಿಸಲಾಗುವುದು. ಹಳ್ಳಿಯಲ್ಲಿ ಪ್ರತಿಯೊಂದು ಸದಸ್ಯರಿಂದ ಗರಿಷ್ಠ ನಾಲ್ಕು ಕ್ವಿಂಟಾಲ್ ಮೊದಲನೇ ದರ್ಜೆಯ ಅಡಿಕೆಯನ್ನು ಮಾತ್ರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯ ಮುಂದಾಳುಗಳು ಮಾಹಿತಿ ಪಡೆದುಕೊಳ್ಳಬಹುದು. ಶಿರಸಿ ಜೊತೆಗೆ ಸಿದ್ದಾಪುರ, ಯಲ್ಲಾಪುರ ಶಾಖೆಗಳಲ್ಲಿಯೂ ಈ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.