ADVERTISEMENT

ಕಾರವಾರ: ಅಲ್ಪ ಅವಧಿಗೆ ಕಲಾವಿದರ ಅಪಸ್ವರ

ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಕೆಗೆ ಜೂನ್ 24ರ ಗಡುವು

ಗಣಪತಿ ಹೆಗಡೆ
Published 19 ಜೂನ್ 2024, 4:42 IST
Last Updated 19 ಜೂನ್ 2024, 4:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಾರವಾರ: ಗುರುತಿನ ಚೀಟಿ ನೀಡುವ ಸಲುವಾಗಿ ನೈಜ ಕಲಾವಿದರ ಪಟ್ಟಿ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಲ್ಪ ಅವಧಿಯಲ್ಲಿ ಅರ್ಜಿ ಕರೆದಿರುವುದಕ್ಕೆ ಕಲಾವಿದರ ವಲಯ ಅಸಮಾಧಾನ ವ್ಯಕ್ತಪಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೈಜ ಕಲಾವಿದರಿಗೆ ಗುರುತಿನ ಚೀಟಿ ವಿತರಣೆ ನಡೆಯಲಿದ್ದು, ನೈಜ ಕಲಾವಿದರಿಗೆ ಅಗತ್ಯ ದಾಖಲೆ ಸಹಿತ ಅರ್ಜಿ ಸಲ್ಲಿಕೆಗೆ ಇಲಾಖೆಯು ಗಡುವು ವಿಧಿಸಿದೆ. ಆದರೆ, ಅರ್ಜಿ ಸಲ್ಲಿಸಲು ಕೇವಲ ಎರಡು ವಾರ ಮಾತ್ರ ಕಾಲಾವಕಾಶ ನೀಡಲಾಗಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಜಿಲ್ಲಾಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸುವುದು ಕಷ್ಟ ಎಂಬುದು ಕಲಾವಿದರ ವಾದ.

ADVERTISEMENT

‘ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಸ್ತಾರವಾಗಿದೆ. ಬಹುತೇಕ ಕಲಾವಿದರು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಅರ್ಜಿ ಆಹ್ವಾನದ ಬಗ್ಗೆ ಅವರಿಗೆ ಮಾಹಿತಿ ತಲುಪಿರುವ ಸಾಧ್ಯತೆಯೂ ಕಡಿಮೆ. ಮಾಹಿತಿ ಇದ್ದರೂ ಜಿಲ್ಲಾಕೇಂದ್ರಕ್ಕೆ ಸಾಗಲು ನೂರಾರು ಕಿ.ಮೀ ಪ್ರಯಾಣ ಬೆಳೆಸಬೇಕಾಗಿದೆ. ಕಲಾವಿದರಲ್ಲಿ ಬಹುತೇಕ ಮಂದಿ ವಯೋವೃದ್ಧರಿದ್ದಾರೆ. ಮಳೆಗಾಲದ ಅವಧಿಯಲ್ಲಿ ಅವರಿಗೆ ಪ್ರಯಾಣವೂ ಕಷ್ಟ. ಹೀಗಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಬೇಕು’ ಎಂದು ಶಿರಸಿ ತಾಲ್ಲೂಕಿನ ಯಕ್ಷಗಾನ ಹಿರಿಯ ಕಲಾವಿದರೊಬ್ಬರು ಹೇಳಿದರು.

‘ಕಲಾವಿದರನ್ನು ಗೌರವಿಸಬೇಕಾಗಿರುವ ಇಲಾಖೆಯು ಗುರುತಿನ ಚೀಟಿ ನೀಡುವ ನೆಪದಲ್ಲಿ ಅರ್ಜಿ ಸ್ವೀಕರಿಸಲು ಜಿಲ್ಲಾಕೇಂದ್ರಕ್ಕೆ ಆಹ್ವಾನಿಸುವ ಬದಲು ಆಯಾ ತಾಲ್ಲೂಕು ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತಿತ್ತು. ಅರ್ಜಿ ಜತೆ ಯಾವ ದಾಖಲೆ ಸಲ್ಲಿಸಬೇಕು ಎಂಬ ಮಾಹಿತಿಯನ್ನೂ ಸರಿಯಾಗಿ ನೀಡುತ್ತಿಲ್ಲ. ಅರ್ಜಿ ಪಡೆಯಲು ನೂರಾರು ಕಿ.ಮೀ ದೂರ ಪ್ರಯಾಣಿಸಿ ಮತ್ತೆ ಅರ್ಜಿ ಸಲ್ಲಿಕೆಗೆ ಪುನಃ ಪ್ರಯಾಣಿಸಲು ಕಷ್ಟವಾಗುತ್ತದೆ’ ಎಂದು ಕಲಾವಿದರೊಬ್ಬರು ದೂರಿದರು.

‘ಗುರುತಿನ ಚೀಟಿ ನೀಡಲು ಕಳೆದ ವರ್ಷವೂ ಇಲಾಖೆಯಿಂದ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿತ್ತು. ಇದುವರೆಗೂ ಚೀಟಿ ನೀಡಿಲ್ಲ. ಈಗ ಪುನಃ ಆಫ್‍ಲೈನ್ ಅರ್ಜಿ ಕರೆಯಲಾಗಿದೆ. ನೇರವಾಗಿ ಇಲಾಖೆ ಸ್ವೀಕರಿಸುವ ಬದಲು ಆಯಾ ಕಲೆಗಳಿಗೆ ಸಂಬಂಧಿಸಿದ ಅಕಾಡೆಮಿಗಳಿಗೆ ಜವಾಬ್ದಾರಿ ವಹಿಸಿದ್ದರೆ ಕಲಾವಿದರಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು’ ಎಂದು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.