ADVERTISEMENT

ಆಟೋದವರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 9:00 IST
Last Updated 11 ಜುಲೈ 2023, 9:00 IST
   

ಶಿರಸಿ: ಆಟೋ ಚಾಲಕ, ಮಾಲೀಕರ ಸಂಕಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸದಿದ್ದರೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಎಚ್ಚರಿಸಿದರು.

ಸಂಕಷ್ಟದಲ್ಲಿರುವ ಆಟೋ ಚಾಲಕ, ಮಾಲೀಕರು, ಎಲ್ಲಾ ವರ್ಗದ ಚಾಲಕ, ಮಾಲೀಕರ ರಕ್ಷಣೆಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಭಾಗದ ಆಟೋ ಚಾಲಕ, ಮಾಲೀಕರ ಸಂಘದ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ ಆಟೋ ಚಾಲಕ, ಮಾಲೀಕರು ಬೀದಿಗೆ ಬಿದ್ದಿದೆ. ರಾಜ್ಯದಲ್ಲಿ15 ಲಕ್ಷ ಆಟೋ ಚಾಲಕರಿದ್ದಾರೆ. 50 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದೇವೆ. ಪ್ರತಿ ಆಟೋ ವಾರ್ಷಿಕ ₹ 10 ಸಾವಿರ ತೆರಿಗೆ ನೀಡಿತ್ತಿದೆ. ಆದರೆ ಈವರೆಗೆ ರಾಜ್ಯ ಸರ್ಕಾರ ಆಟೋದವರಿಗೆ ಯಾವ ಸೌಲಭ್ಯ ನೀಡಿಲ್ಲ. ಪ್ರತಿಯೊಂದು ಸರ್ಕಾರವೂ ಇವರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ. ಹೀಗಾಗಿ ಸರ್ಕಾರಕ್ಕೆ ಪಾಠ ಕಲಿಸುವ ಅಗತ್ಯವಿದೆ ಎಂದರು. ಬೇಡಿಕೆ ಈಡೇರಿಸದಿದ್ದರೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಆಟೋ ಚಾಲಕ, ಮಾಲೀಕರು ಹಾಗೂ ಅವರ ಕುಟುಂಬದ ಸಮಸ್ಯೆ ಅರಿಯಲು ರಾಜ್ಯ ಸರ್ಕಾರ ಆಯೋಗ ರಚಿಸಬೇಕು. ಹೊಸ ರಿಕ್ಷಾ ಖರೀದಿಸಲು ವಿಶೇಷ ಸಬ್ಸಿಡಿ ನೀಡುವಂತಾಗಬೇಕು.

ADVERTISEMENT

ಆಟೋ ರಿಕ್ಷಾಗಳಿಗೆ ಇರುವ ವಿಮಾ ಪಾಲಿಸಿಗಳಿಗೆ ವಿಶೇಷ ರಿಯಾಯತಿ ಘೋಷಿಸಬೇಕು. ಅಸಂಘಟಿತ

ವಲಯದಿಂದ ಕಾರ್ಮಿಕ ವರ್ಗಕ್ಕೆ ಸೇರಿಸಿ ಸರ್ಕಾರಿ ಸೌಲಭ್ಯ ಕೊಡಬೇಕು. ಮಕ್ಕಳಿಗೆ ಉಚಿತ ಶಿಕ್ಷಣ, ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಸಿಗುವಂತಾಗಬೇಕು. 60 ವರ್ಷ ಮೇಲ್ಪಟ್ಟ ಆಟೋ ಚಾಲಕ, ಮಾಲೀಕರ ಕುಟುಂಬಗಳಿಗೆ ಪಿಂಚಣಿ ಸೌಲಭ್ಯ ಕೊಡಬೇಕು. ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬೇಕಾದಲ್ಲಿ ಆಟೋ ಸಂಘದ ಗಮನಕ್ಕೆ ತರಬೇಕು. ಪ್ರತಿ ತಿಂಗಳಿಗೆ ಕನಿಷ್ಟ 100 ಲೀಟರ್ ಗ್ಯಾಸ್ ಅಥವಾ ಪೆಟ್ರೋಲ್ ಉಚಿತವಾಗಿ ನೀಡಬೇಕು. ವೈಟ್ ಬೋರ್ಡ ವಾಹನಗಳು ಅನಧಿಕೃತವಾಗಿ ಬಾಡಿಗೆ ಹೊಡೆಯುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆ ವೇಳೆ ನಗರದ ಝೂ ಸರ್ಕಲ್ ಬಳಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು. ನಂತರ ಉಪವಿಭಾಗಾಧಿಕಾರಿ ದೇವರಾಜ್ ಆರ್ ಸವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಧಾರವಾಡ ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಜೀವನ ಹುತ್ತಕುರಿ, ಗದಗದ ವಿಜಯ ಕಲ್ಮನೆ, ಹುಬ್ಬಳ್ಳಿಯ ಬಾಬಜನ ಬಳಗನೂರ್, ಶಿರಸಿಯ ಉಪೇಂದ್ರ ಪೈ, ವಿಶ್ವನಾಥ ಗೌಡ ಇತರರಿದ್ದರು.

ಉತ್ತರ ಕರ್ನಾಟಕ ಚಾಲಕರ ಸಂಘ ಹುಬ್ಬಳ್ಳಿ, ಶಿರಸಿ ನಗರ ಆಟೋ ಚಾಲಕರ ಮಾಲೀಕರ ಸಂಘ, ಮಾರಿಕಾಂಬಾ ಚಾಲಕ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಕುಮಟಾ, ಮಾರಿಕಾಂಬಾ ಟ್ಯಾಕ್ಸಿ ಯೂನಿಯನ್ ಹಾಗೂ ಇತರ ಚಾಲಕ, ಮಾಲೀಕರ ಸಂಘಟನೆ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.