ಹಳಿಯಾಳ: 2021ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ತಾಲ್ಲೂಕಿನ ಮಾಗವಾಡ ಗೌಳಿವಾಡಾ ಗ್ರಾಮದ ಹೋಳಿ ಸಿಗ್ಮೋ ಕುಣಿತದ ಕಲಾವಿದ ಬಾಗು ಧಾಕೂ ಕೊಳಾಪ್ಪೆ (90) ಆಯ್ಕೆಯಾಗಿದ್ದಾರೆ. ಬುಡಕಟ್ಟು ದನಗರ ಗೌಳಿ ಸಮಾಜದ ಪಾರಂಪರಿಕ ಕಲೆ, ಸಂಸ್ಕೃತಿಗಾಗಿ 50 ವರ್ಷಗಳಿಂದ ಪಟ್ಟ ಶ್ರಮವನ್ನು ಸರ್ಕಾರ ಗುರುತಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.
ಪ್ರಶಸ್ತಿ ಪ್ರಕಟವಾದ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅವರು, ‘ಸಮುದಾಯದ ಕಲೆಗೆ ಸರ್ಕಾರದ ಅಧಿಕೃತ ಮಾನ್ಯತೆ ದೊರೆತಂತಾಗಿದೆ’ ಎಂದು ಹೇಳುತ್ತಾರೆ.
ದನಗರ ಗೌಳಿ ಸಮುದಾಯದ ಗಜಾ ನೃತ್ಯ, ಹೋಳಿ ಸಿಗ್ಮೋ ನೃತ್ಯ, ಡೊಳ್ಳು ಕುಣಿತ ಮತ್ತಿತರ ಸಾಂಸ್ಕೃತಿಕ ಕಲೆಯನ್ನು ಉಳಿಸಲು ಹಾಗೂ ಬೆಳೆಸಲು ಶ್ರಮಿಸುತ್ತಿದ್ದಾರೆ. ಹೋಳಿ ಸಿಗ್ಮೋ ನೃತ್ಯದ 200– 300 ಜತ್ತಿಗಳನ್ನು (ಹಾಡು) ಮರಾಠಿ ಭಾಷೆಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಾರೆ. ಹೋಳಿ ನೃತ್ಯದಲ್ಲೂ ಪ್ರವೀಣರಾಗಿದ್ದಾರೆ.
ಶೈಕ್ಷಣಿಕ ಅನುಭವ ಇಲ್ಲದಿದ್ದರೂ ತಾವೇ ಹಾಡು ರಚಿಸಿ ಹಾಡುತ್ತಾರೆ. ತಮ್ಮ ಗ್ರಾಮದ 50ಕ್ಕೂ ಹೆಚ್ಚು ಜನರಿಗೆ ಕಲೆಯ ತರಬೇತಿ ನೀಡಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲೂ ದನಗರ ಗೌಳಿ ಸಮುದಾಯದ ಕಲೆ ಉಳಿಸಿ ಬೆಳೆಸಲು ತಂಡಗಳನ್ನು ರಚಿಸಿ ತರಬೇತಿ ನೀಡಿದ್ದಾರೆ.
ಬಾಗು ಕೊಳಾಪ್ಪೆ ದೈವ ಭಕ್ತರಾಗಿದ್ದು, ಪಂಡರಪುರದ ವಿಠ್ಠಲನ ಆರಾಧಕರು. 42 ವರ್ಷಗಳಿಂದ ವಾರಕರಿ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ವರ್ಷದಲ್ಲಿ ನಾಲ್ಕೈದು ಬಾರಿ ವಾರಕರಿಯ ಜೊತೆ ದಿಂಡಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಹಗ್ಗ ತಯಾರಿಕೆ: ಬಾಗು ಕೊಳಾಪ್ಪೆ ಹಳೆಯ, ಹರಿದ ಬಟ್ಟೆಗಳಿಂದ ಹಗ್ಗವನ್ನು ತಯಾರಿಸುತ್ತಾರೆ. ಬಿದಿರಿನಿಂದ ಬುಟ್ಟಿ ತಯಾರಿಸುವ ಕಲೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಇದಕ್ಕೆ ಮನೆಯ ಸದಸ್ಯರು ಸೇರಿಕೊಂಡು ಕಲೆಯನ್ನು ಮುಂದುವರಿಸುತ್ತಿದ್ದಾರೆ.
ಹೋರಾಟಗಾರ:ದನಗರ ಗೌಳಿ ಸಮುದಾಯದ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿದ್ದಾರೆ. ತಮ್ಮ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಮಾಗವಾಡ ಗೌಳಿವಾಡಾ ಗುಡ್ಡಗಾಡು ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೋರಾಡಿ 1994ರಲ್ಲಿ ಒಂದರಿಂದ ಐದನೇ ತರಗತಿವರೆಗೆ ಶಾಲೆಯನ್ನು ಮಂಜೂರು ಮಾಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.