ಬನವಾಸಿ (ಮಯೂರವರ್ಮ ವೇದಿಕೆ): ಕನ್ನಡ ನೆಲದ ಇತಿಹಾಸ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ನೃತ್ಯ ರೂಪಕ, ಗಾಯನಗಳ ಪ್ರಸ್ತುತಿ, ನೆಲದ ಕಲೆಯಾದ ಕುಸ್ತಿ ಸ್ಪರ್ಧೆ ಸೇರಿ ಹಲವು ವೈವಿಧ್ಯತೆಗಳನ್ನು ಒಳಗೊಂಡು ಕದಂಬರ ರಾಜಧಾನಿ ಬನವಾಸಿಯಲ್ಲಿ ನಡೆದ ಎರಡು ದಿನಗಳ ಕದಂಬೋತ್ಸವ ಬುಧವಾರ ಅದ್ಧೂರಿ ತೆರೆ ಕಂಡಿದೆ.
ಎರಡನೇ ದಿನ ಸಾಂಸ್ಕೃತಿಕ ವೈಭವದಲ್ಲಿ ಚಿತ್ರದುರ್ಗದ ಶಮಾ ಭಾಗ್ವತ್ ನೃತ್ಯ ರೂಪಕ, ಶಿರಸಿಯ ರೇಖಾ ದಿನೇಶ ಅವರ ಸಂಗೀತ, ಯಕ್ಷಗೆಜ್ಜೆಯ ಪುಟ್ಟ ಮಕ್ಕಳಿಂದ ಯಕ್ಷಗಾನ, ಯಲ್ಲಾಪುರ ವಿನುತಾ ಹೆಗಡೆ ಅವರಿಂದ ನೃತ್ಯ, ಹುಬ್ಬಳ್ಳಿಯ ನಿನಾದ ತಬಲಾ ಹಾಗೂ ಸಂಗೀತ ವಿದ್ಯಾಲಯದ ಕಲಾವಿದರಿಂದ ಸಪ್ತ ತಬಲಾ ವಾದನ, ಚಿಕ್ಕಮಗಳೂರಿನ ಭಾಗ್ಯಶ್ರೀ ಗೌಡ ಅವರ ಸುಗಮ ಸಂಗೀತ, ಬೆಂಗಳೂರಿನ ವಿಜೇತಾ ಸುದರ್ಶನ ಅವರ ಸುಗಮ ಸಂಗೀತ, ಮುಂಬಯಿಯ ರಮೀಂದರ್ ಖುರಾನಾ ಅವರ ಓಡಿಸ್ಸಿ ನೃತ್ಯ, ಕಲಬುರ್ಗಿ ಬಸಯ್ಯ ಗುತ್ತೇದಾರ ಅವರ ಜನಪದ ಗೀತೆ, ಯಾದಗಿರಿ ಬಸವರಾಜ್ ಬಂಟನೂರ್ ಅವರ ಸುಗಮ ಸಂಗೀತ, ಕೃಪಾ ಹೆಗಡೆ ಅವರ ಭರತನಾಟ್ಯ, ರಜತ ಹೆಗಡೆ ಹಾಗೂ ತಂಡ ಮತ್ತು ಶ್ರೀಲಕ್ಷ್ಮೀ ಹೆಗಡೆ ತಂಡದಿಂದ ಸಂಗೀತದ ಜತೆ ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಸಮಾರೋಪದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಝಮೀರುಲ್ಲಾ ಷರೀಫ, ಕನ್ನಡ ನಾಡಿಗೆ ಕದಂಬರು ನೀಡಿದ ಕೊಡುಗೆಗಳ ಸ್ಮರಣೆ ಮಾಡಬೇಕು. ಇತಿಹಾಸದ ಸಾರ್ವಕಾಲಿಕ ಸಂದೇಶಗಳ ಪಾಲನೆ ಆಗಬೇಕು. ಅವಮಾನ ಮೆಟ್ಟಿನಿಂತು ಭವಿಷ್ಯ ಬೆಳಗಿದ ಕದಂಬ ವಂಶದ ಸಂಸ್ಥಾಪಕ ಮಯೂರ ವರ್ಮ ನೀಡಿದ ಆದರ್ಶ ಎಲ್ಲರಿಗೂ ಪಾಠವಾಗಬೇಕು. ಸಮಾಜದಲ್ಲಿನ ಮೌಲ್ಯಗಳ ಪುನರುತ್ಥಾನ ಆಗಬೇಕು. ಪ್ರತಿಯೊಬ್ಬರೂ ಮನುಷ್ಯತ್ವದ ಸಂದೇಶ ಸಾರುವವರಾಗಬೇಕು ಎಂದು ಹೇಳಿದರು.
ಮತಧರ್ಮಗಳು ಮನುಕುಲಕ್ಕೆ ಧಕ್ಕೆ ಮಾಡುತ್ತಿರುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮನಸ್ಸುಗಳ ಜೋಡಿಸುವ ಕಾರ್ಯ ಮಾಡಿದೆ. ಪಂಪ ಸಾಹಿತ್ಯವು ಮನುಷ್ಯ ತಾನೊಂದೇ ವಲಂ ಸಾರುವ ಮೂಲಕ ಮಾನವ ಕುಲ ಒಂದೇ ಎಂಬುದನ್ನು ಸಾರಿದೆ. ಅಂಥ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಇಂದಿಗೂ ಶ್ರೀಮಂತವಾಗಿದೆ. ಅದರಲ್ಲಿನ ಕೆಲ ಅಂಶಗಳನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಕನ್ನಡ ನಾಡು ಇನ್ನಷ್ಟು ಸುಂದರವಾಗುತ್ತದೆ ಎಂದ ಅವರು, ಬನವಾಸಿಯು ದಕ್ಷಿಣದ ಕಾಶಿ ಹಾಗೂ ಸಸ್ಯ ಕಾಶಿಯಾಗಿದೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಸ್ಟೆಲ್ಲಾ ವರ್ಗೀಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ರಾಮಚಂದ್ರ ಮಡಿವಾಳ, ಶಿರಸಿ ಉಪವಿಭಾಗಾಧಿಕಾರಿ ಅಪರ್ಣಾ ರಮೇಶ, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಬಿ ಆಯೀಷಾ ಇದ್ದರು.
ಬುಡಕಟ್ಟು ಜನಾಂಗಗಳ ಸಂಸ್ಕೃತಿ ಸೇರಿದಂತೆ ಸಮಗ್ರ ಅಧ್ಯಯನಕ್ಕಾಗಿ ಬುಡಕಟ್ಟು ಅಧ್ಯಯನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅವರ ತಾಯಿ ಬೇರು ಇಲ್ಲಿದೆ. ಈ ಕಾರಣ ಬನವಾಸಿಯಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರವನ್ನಾದರೂ ಸ್ಥಾಪಿಸಲು ಸರ್ಕಾರ ಮುಂದಾಗಬೇಕುಝಮೀರುಲ್ಲಾ ಷರೀಫ, ಸಾಹಿತಿ
ಗಮನ ಸೆಳೆದ ಕುಸ್ತಿ:
ಮೊದಲ ಬಾರಿಗೆ ಕದಂಬೋತ್ಸವ ಮೈದಾನದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ ಜರುಗಿತು. 30ರಿಂದ 80 ಕೆಜಿ ವಿಭಾಗಗಳಲ್ಲಿ 150 ಕುಸ್ತಿಪಟುಗಳು ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದರು. ಇದೇ ವೇಳೆ ವಿಶೇಷವಾಗಿ ಕದಂಬ ಕೇಸರಿ ಕುಸ್ತಿ ಸ್ಪರ್ಧೆಯೂ ಜರಿಗಿತು. ಸಾವಿರಾರು ಕುಸ್ತಿ ಪ್ರೀಯರು ಅಖಾಡದ ಸುತ್ತ ಜಮಾಯಿಸಿ ಕುಸ್ತಿ ಸ್ಪರ್ಧೆಯನ್ನು ಆನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.