ADVERTISEMENT

ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

​ಪ್ರಜಾವಾಣಿ ವಾರ್ತೆ
Published 7 ಮೇ 2023, 5:27 IST
Last Updated 7 ಮೇ 2023, 5:27 IST
ಅಂಕೋಲಾದಲ್ಲಿ ಮಾರಾಟಕ್ಕೆ ಇಡಲಾಗಿದ್ದ ನಾಟಿಕೊಳೀಗಳು
ಅಂಕೋಲಾದಲ್ಲಿ ಮಾರಾಟಕ್ಕೆ ಇಡಲಾಗಿದ್ದ ನಾಟಿಕೊಳೀಗಳು    

ಮೋಹನ ದುರ್ಗೇಕರ

ಅಂಕೋಲಾ: ಇಲ್ಲಿನ ಪ್ರಸಿದ್ಧ ಶಾಂತದುರ್ಗಾ ದೇವಿಯ ಬಂಡಿಹಬ್ಬದ ಆಚರಣೆ ನಡೆಯುತ್ತಿದ್ದು, ಇದೇ ವೇಳೆ ಹೆಚ್ಚು ಮಾರಾಟ ಕಾಣುವ ನಾಟಿಕೋಳಿ ಬೆಲೆ ಗಗನಕ್ಕೇರಿದೆ.

ಮೇ ತಿಂಗಳಿನಲ್ಲಿ ನಡೆಯುವ ಬಂಡಿಹಬ್ಬವನ್ನು ಇಲ್ಲಿನ ಜನರು ಅದ್ದೂರಿಯಾಗಿ ಆಚರಿಸುತ್ತಾರೆ. ಮನೆಗಳಿಗೆ ದೂರದ ಊರುಗಳ ನೆಂಟರಿಷ್ಟರನ್ನು ಆಹ್ವಾನಿಸುತ್ತಾರೆ. ಈ ವೇಳೆ ಹಬ್ಬದ ವಿಶೇಷ ಅಡುಗೆಗೆ ನಾಟಿಕೋಳಿ ಬಳಸುವುದು ಹೆಚ್ಚು. ಹೀಗಾಗಿ ಹಬ್ಬದ ವೇಳೆ ನಾಟಿಕೋಳಿಗೆ ಇನ್ನಿಲ್ಲದ ಬೇಡಿಕೆ ಸಿಗುತ್ತಿದೆ.

ADVERTISEMENT

ಸಾಮಾನ್ಯವಾಗಿ ಬಂಡಿಹಬ್ಬದ ವೇಳೆಯಲ್ಲಿ ಭಾವಿಕೇರಿ, ಹಟ್ಟಿಕೇರಿ, ಬೆಳಂಬಾರ ಸೇರಿದಂತೆ ವಿವಿಧ ಹಳ್ಳಿಗಳ ರೈತರು ಮನೆಯಲ್ಲಿ ಸಾಕಿರುವ ನಾಟಿ ಕೋಳಿಗಳು ಪಟ್ಟಣದಲ್ಲಿ ಮಾರಾಟವಾಗುತ್ತವೆ. ಈ ಬಾರಿ ದೂರದ ಗದಗ, ಹುಬ್ಬಳ್ಳಿ, ಹಳಿಯಾಳ, ಕಲಘಟಗಿ ಮುಂತಾದ ಕಡೆಗಳಿಂದಲೂ ನಾಟಿಕೋಳಿಗಳನ್ನು ತರಲಾಗಿತ್ತು. ತಮಿಳುನಾಡಿನಿಂದಲೂ ಬಂದ ಕೋಳಿ ಮಾರಾಟ ತಂಡ ಬೀಡುಬಿಟ್ಟಿದೆ.

ಸಾಮಾನ್ಯ ದಿನಗಳಲ್ಲಿ ಪ್ರತಿ ಜೋಡಿ ನಾಟಿಕೋಳಿಗೆ ಸರಾಸರಿ ₹800–900 ದರ ಇದ್ದರೆ, ಈಗ ಅದು ₹1,200 ರಿಂದ ₹1,600ಕ್ಕೆ ತಲುಪಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ತರಲಾದ ಕೋಳಿಗಳ ಬೆಲೆ ₹2 ಸಾವಿರ ದಾಟಿದೆ. ಬಂಡಿಹಬ್ಬದ ಮುನ್ನಾ ದಿನವಾಗಿದ್ದ ಗುರುವಾರ ಪಟ್ಟಣದ ಮಾರುಕಟ್ಟೆಯಲ್ಲಿ ₹2,500 ದರಕ್ಕೆ ಜೋಡಿ ಕೋಳಿ ಮಾರಾಟ ಕಂಡಿದ್ದೂ ದಾಖಲೆ ಎನಿಸಿದೆ.

ಬಯಲುಸೀಮೆ ಪ್ರದೇಶಗಳಿಂದ ಈಚಿನ ವರ್ಷಗಳಲ್ಲಿ ಗುಣಮಟ್ಟವಿಲ್ಲದ ನಾಟಿಕೋಳಿ ಹೆಚ್ಚು ಮಾರಾಟಕ್ಕೆ ತರಲಾಗುತ್ತಿದೆ. ಇವುಗಳನ್ನು ಕಡಿಮೆ ದರಕ್ಕೆ ಮಾರುವುದರಿಂದ ಸ್ಥಳೀಯ ನಾಟಿಕೋಳಿಗಳ ಮಾರಾಟ ಕುಸಿದಿದ್ದು ನಷ್ಟ ಅನುಭವಿಸುತ್ತಿದ್ದೇವೆ.
ಶೈಲಾ ನಾಯ್ಕ, ಕೋಳಿ ವ್ಯಾಪಾರಿ

‘ಬಂಡಿಹಬ್ಬಕ್ಕೆ ನಾಟಿಕೋಳಿಯ ಅಡುಗೆಯೇ ವಿಶೇಷ ಖಾದ್ಯವಾಗಿರುವ ಕಾರಣ ಅವುಗಳ ದರ ಹೆಚ್ಚಿಸಲಾಗುತ್ತಿದೆ. ಹೇಗಿದ್ದರೂ ಬೇಡಿಕೆ ಇದೆ ಎಂಬುದನ್ನು ಅರಿತಿರುವ ವ್ಯಾಪಾರಿಗಳು ಈ ಸಮಯದಲ್ಲಿ ಲಾಭ ಹೆಚ್ಚಿಸಿಕೊಳ್ಳಲು ದರ ಹೆಚ್ಚಿಸಿದ್ದಾರೆ. ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾಗಿದ್ದು ನಾಟಿಕೋಳಿ ದರ ಬಡವರ ಜೇಬಿಗೆ ಭಾರವೆನಿಸಿದೆ’ ಎಂದು ಕೇಣಿಯ ಶೈಲೇಶ್ ಹೇಳುತ್ತಾರೆ.

‘ಬಂಡಿ ಹಬ್ಬದ ವೇಳೆ ನಾಟಿಕೋಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ ನೂರಾರು ಕೋಳಿಗಳನ್ನು ತಂದು ಮಾರಾಟ ಮಾಡುತ್ತೇವೆ. ದರದಲ್ಲಿ ಏರಿಕೆಯಾಗಿದ್ದರೂ ಜನ ಖರೀದಿಗೆ ಹಿಂದೇಟು ಹಾಕುತ್ತಿಲ್ಲ. ನಾಟಿಕೋಳಿ ನಿರ್ವಹಣೆಗೆ ವೆಚ್ಚವೂ ಹೆಚ್ಚು ಬೇಕಾಗಿದ್ದು ದರವನ್ನು ಹೆಚ್ಚಳ ಮಾಡುವುದು ನಮಗೂ ಅನಿವಾರ್ಯ’ ಎನ್ನುತ್ತಾರೆ ಹಳಿಯಾಳದಿಂದ ಕೋಳಿ ವ್ಯಾಪಾರಕ್ಕೆ ಬಂದಿದ್ದ ಸತೀಶ್.

ಅಂಕೋಲಾ ಬಂಡಿಹಬ್ಬದ ನಿಮಿತ್ತ ಪಟ್ಟಣದಲ್ಲಿ ನಾಟಿಕೋಳಿ ಮಾರಾಟದಲ್ಲಿ ಮಹಿಳೆಯೊಬ್ಬರು ತೊಡಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.