ಭಟ್ಕಳ: ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಳ್ವೆಕೋಡಿ ಗ್ರಾಮ ಪ್ರವಾಸಿ, ವ್ಯಾಪಾರ ಹಾಗು ಧಾರ್ಮಿಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದ್ದರೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾಗಿದೆ. ಹೀಗಾಗಿ ಇಲ್ಲಿಗೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಅಳ್ವೆಕೋಡಿ ಬಂದರು ಅಭಿವೃದ್ದಿ ಪಡಿಸಿದ ನಂತರ ನಿತ್ಯ ಇಲ್ಲಿ ನೂರಕ್ಕೂ ಅಧಿಕ ದೋಣಿಗಳು ಲಂಗರು ಹಾಕುತ್ತಿವೆ. ಮೀನುಗಾರಿಕೆ ವ್ಯಾಪಾರ ವಹಿವಾಟು ಚಟುವಟಿಕೆಗಳು ಭಟ್ಕಳದ ಮಾವಿನಕುರ್ವಾ ಬಂದರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದರಿಂದ ನಿತ್ಯ ರಾಜ್ಯ ಹೋರರಾಜ್ಯ ಮೀನು ಖರೀದಿ ಮಾರಾಟಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ.
‘ಶಿರಾಲಿ ತಟ್ಟಿಹಕ್ಕಲದಿಂದ ಅಳ್ವೆಕೋಡಿ ಸೇತುವೆಯ ತನಕ ಅಂದಾಜು 2.5 ಕಿ.ಮೀ ರಸ್ತೆಯೂ ಕಿರಿದಾಗಿದ್ದು, ತಿರುವುಮುರುವಿನಿಂದ ಕೂಡಿದೆ. ಬಂದರಿನಿಂದ ನಿತ್ಯ ಮೀನುಗಳನ್ನು ಸಾಗಿಸುವ ವಾಹನಗಳು ಈ ರಸ್ತೆಯಲ್ಲಿ ತೀರುಗಾಡುವುದರಿಂದ ಲಘು ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ರಸ್ತೆಯ ಡಾಂಬರ್ ಕಿತ್ತು ಹೋಗಿದ್ದು, ಸಂಪೂರ್ಣ ದುಃಸ್ಥಿತಿಯಲ್ಲಿದೆ’ ಎನ್ನುತ್ತಾರೆ ಸ್ಥಳೀಯರಾದ ಭಾಸ್ಕರ ಮೊಗೇರ.
‘ಸಮರ್ಪಕ ಚರಂಡಿ ವ್ಯವಸ್ಥೆ ಇರದ ಕಾರಣ ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲುತ್ತಿದ್ದು, ವಾಹನ ಚಲಾಯಿಸಲು ಸವಾರರು ಪರದಾಡುವಂತಾಗಿದೆ. ರಸ್ತೆಯ ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖೆಗೆ ದೂರಿದರೂ ಸ್ಪಂದಿಸಿಲ್ಲ’ ಎಂದರು.
‘ಅಳ್ವೆಕೋಡಿಯಿಂದ ಮುರ್ಡೇಶ್ವರಕ್ಕೆ ಸಂಪರ್ಕಿಸುವ ಕಡಲತಡಿಯ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ. ಮುರ್ಡೇಶ್ವರದವರೆಗೂ ರಸ್ತೆ ಮರುನಿರ್ಮಿಸಿದರೆ ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಅನುಕೂಲವಾಗಲಿದೆ’ ಎಂದೂ ಹೇಳಿದರು.
‘ಭಟ್ಕಳದಿಂದ ಅಳ್ವೆಕೋಡಿಗೆ ಶಿರಾಲಿ ಮಾರ್ಗವಾಗಿ ಅಂದಾಜು 8 ಕಿ.ಮೀ ಕ್ರಮಿಸಬೇಕಾಗುತ್ತದೆ. ಅದೇ ಭಟ್ಕಳದ ತೆಂಗಿನಗುಂಡಿ ಬಂದರಿನಿಂದ 200 ಮೀ. ದೋಣಿಯಲ್ಲಿ ಹೊಳೆ ದಾಟಿದರೆ ಅಳ್ವೆಕೋಡಿ ತಲುಪಬಹುದು. ಅಳ್ವೆಕೋಡಿ, ತೆಂಗಿನಗುಂಡಿ ಮಧ್ಯೆ ಇರುವ ನದಿಗೆ ಸೇತುವೆ ನಿರ್ಮಾಣ ಮಾಡಿದರೆ ಸಂಪರ್ಕ ಸುಲಭವಾಗಲಿದೆ. ಎರಡು ದಶಕಗಳಿಂದ ಈ ಬೇಡಿಕೆ ಇದ್ದರೂ ಅನುಷ್ಠಾನಗೊಂಡಿಲ್ಲ’ ಎನ್ನುತ್ತಾರೆ ಸ್ಥಳೀಯ ಮುಖಂಡ ರಾಮಾ ಮೊಗೇರ.
ಶಿರಾಲಿಯಿಂದ ಅಳ್ವೆಕೋಡಿ ಸಂಪರ್ಕಿಸುವ ರಸ್ತೆ ದುರಸ್ತಿಗೆ ಪ್ರಕೃತಿ ವಿಕೋಪ ನಿಧಿಯಡಿ ₹ 50 ಲಕ್ಷ ಮೀಸಲಿಡಲಾಗಿದೆ. ಅಳ್ವೆಕೋಡಿ–ತೆಂಗಿನಗುಂಡಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಚಿವ ಸಂಸದರಿಗೆ ಮನವಿ ಮಾಡಲಾಗಿದೆಭಾಸ್ಕರ ದೈಮನೆ ಶಿರಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ
‘ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಆಧರಿಸಿ ಕೋವಿಡ್ ಹರಡುವ ಮೊದಲು 7-8 ಬಸ್‍ಗಳು ನಿತ್ಯ ಅಳ್ವೆಕೋಡಿಗೆ ಸಂಚರಿಸುತ್ತಿದ್ದವು. ಕೋವಿಡ್ ಸಾಂಕ್ರಾಮಿಕ ಹರಡಿದ ನಂತರದ ದಿನಗಳಲ್ಲಿ ಅದನ್ನು ಮೂರಕ್ಕೆ ಕಡಿತಗೊಳಿಸಲಾಗಿದೆ. ಅದು ಕೂಡ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ದೇವಸ್ಥಾನ ಹಾಗೂ ಬಂದರಿಗೆ ಆಗಮಿಸುವವರು ಖಾಸಗಿ ವಾಹನ ಅವಲಂಬಿಸಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಸ್ಥಳೀಯರಾದ ಕೇಶವ ಮೊಗೇರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.