ADVERTISEMENT

ಬಿ.ಇಡಿ ಎರಡನೇ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ 11ರಿಂದ 19ರವರೆಗೆ ಪರೀಕ್ಷೆ

ಸೆಮಿಸ್ಟರ್ ಬಡ್ತಿ ನೀಡಲು ಹೆಚ್ಚಿದ ಕೂಗು

ಸದಾಶಿವ ಎಂ.ಎಸ್‌.
Published 3 ಸೆಪ್ಟೆಂಬರ್ 2020, 6:09 IST
Last Updated 3 ಸೆಪ್ಟೆಂಬರ್ 2020, 6:09 IST
ಡಾ.ರವೀಂದ್ರನಾಥ ಕದಂ
ಡಾ.ರವೀಂದ್ರನಾಥ ಕದಂ   

ಕಾರವಾರ: ಬಿ.ಇಡಿಯ ಒಂದು ಮತ್ತು ಮೂರನೇ ಸೆಮಿಸ್ಟರ್‌ಗಳಿಗೆ ಸೆ.11ರಿಂದ 19ರವರೆಗೆ ಪರೀಕ್ಷೆ ನಡೆಸಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (ಕೆ.ಯು.ಡಿ) ಸಜ್ಜಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಪರೀಕ್ಷೆಯ ಬದಲು ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಬೇಕು ಎಂಬುದು ಪ್ರಶಿಕ್ಷಣಾರ್ಥಿಗಳ ಒತ್ತಾಯವಾಗಿದೆ.

ಕೊರೊನಾ ಕಾರಣದಿಂದ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಆದ್ದರಿಂದ ರಾಜ್ಯದ ಇತರ ವಿಶ್ವವಿದ್ಯಾಲಯಗಳು ಪ್ರಶಿಕ್ಷಣಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ಗಳಿಗೆ ಬಡ್ತಿ ನೀಡಿವೆ. ಅದೇರೀತಿಯಲ್ಲಿ ಕೆ.ಯು.ಡಿ ಕೂಡ ನೀಡಬೇಕು ಎಂದು ಆಗ್ರಹಿಸಿ ಹಲವು ಪ್ರಶಿಕ್ಷಣಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಟ್ವಿಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.

ಪ್ರಶಿಕ್ಷಣಾರ್ಥಿಗಳ ವಾದವೇನು?: ‘ಪರೀಕ್ಷೆ ನಡೆಸುವ ಬಗ್ಗೆ ಲಾಕ್‌ಡೌನ್ ಅವಧಿಯಲ್ಲಿ ಕೆ.ಯು.ಡಿ.ಯಿಂದ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದರೆ, ದಿಢೀರ್ ಆಗಿ ಸೆ.1ರಂದು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿರುವುದು ಗೊಂದಲ ಉಂಟುಮಾಡಿದೆ. ಇದರಿಂದ ಸಿದ್ಧತೆಗೆ ಕಾಲಾವಕಾಶ ಕಡಿಮೆಯಾಗುತ್ತದೆ’ ಎಂಬುದು ಹಲವು ಪ್ರಶಿಕ್ಷಣಾರ್ಥಿಗಳ ವಾದವಾಗಿದೆ.

ADVERTISEMENT

‘ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಸಾರಿಗೆ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಮೊದಲಿನಂತಾಗಿಲ್ಲ. ಗ್ರಾಮೀಣ ಭಾಗದವರಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಸಮಸ್ಯೆಯಾಗುತ್ತದೆ. ಕಾಲೇಜು ಇರುವ ಪ್ರದೇಶದಲ್ಲಿ ಈ ಮೊದಲು ವಾಸವಿದ್ದ ಹಾಸ್ಟೆಲ್, ಪಿ.ಜಿ ಕೊಠಡಿಗಳನ್ನು ಖಾಲಿ ಮಾಡಿದ್ದೇವೆ. ಈಗ ಪರೀಕ್ಷೆ ಸಲುವಾಗಿ ವಾಸ್ತವ್ಯಕ್ಕೆ ಬಾಡಿಗೆಗೆ ಕೊಠಡಿ ಸಿಗುವುದಿಲ್ಲ. ಅಲ್ಲದೇ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸುರಕ್ಷತೆಯ ಸಮಸ್ಯೆಯಾಗುತ್ತದೆ’ ಎಂಬುದು ಅವರ ಆತಂಕವಾಗಿದೆ.

ಸಭೆ ನಡೆಸುವುದು ಸೂಕ್ತ: ‘ಪ್ರಶಿಕ್ಷಣಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಆಯಾ ಜಿಲ್ಲೆಗಳ ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರ ಸಭೆ ಹಮ್ಮಿಕೊಂಡು ನಿರ್ಧಾರಕ್ಕೆ ಬರುವುದು ಸೂಕ್ತ. ಈ ಬಗ್ಗೆ ಕೆ.ಯು.ಡಿ ಆಡಳಿತ ಮಂಡಳಿ ಚಿಂತಿಸಬೇಕು’ ಎನ್ನುವುದು ಕೆ.ಯು.ಡಿ.ಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಶಿವಾನಂದ ನಾಯಕ ಅವರ ಅನಿಸಿಕೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಒಟ್ಟು 43 ಬಿ.ಇಡಿ ಕಾಲೇಜುಗಳಿದ್ದು, ಅಂದಾಜು 5 ಸಾವಿರ ಪ್ರಶಿಕ್ಷಣಾರ್ಥಿಗಳಿದ್ದಾರೆ.

‘ಸರ್ವಾನುಮತದ ನಿರ್ಣಯ’:‘ವರ್ಷದ ಚಟುವಟಿಕೆಗಳ ಕ್ಯಾಲೆಂಡರ್ ಆಧಾರದಲ್ಲೇ ವೇಳಾಪಟ್ಟಿ ಸಿದ್ಧ ಪಡಿಸಲಾಗಿದೆ. ಬಿ.ಇಡಿ ವೃತ್ತಿಪರ ಕೋರ್ಸ್ ಆಗಿರುವ ಕಾರಣ ಪ್ರಶಿಕ್ಷಣಾರ್ಥಿಗಳು ಪರೀಕ್ಷೆ ಬರೆಯುವುದೇ ಸೂಕ್ತ ಎಂದು ಆಗಸ್ಟ್‌ 28ರಂದು ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು’ ಎಂದು ಕೆ.ಯು.ಡಿ.ಯ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ರವೀಂದ್ರನಾಥ ಕದಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಶಿಕ್ಷಣಾರ್ಥಿಗಳು ಬರಲು ಸಾರಿಗೆ ಸೌಲಭ್ಯ, ಆರೋಗ್ಯ ಹಾಗೂ ಪೊಲೀಸ್ ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲಾಡಳಿತಕ್ಕೆ ವಿಶ್ವವಿದ್ಯಾಲಯದಿಂದ ಪತ್ರ ಬರೆದು ಮನವಿ ಮಾಡಲಾಗುವುದು. ಆಯಾ ಕಾಲೇಜುಗಳ ಪ್ರಾಂಶುಪಾಲರೂ ವಿನಂತಿ ಮಾಡಬೇಕು. ಅಲ್ಲದೇ ಬೇರೆ ಕಡೆಯಿಂದ ಬರುವ ಪ್ರಶಿಕ್ಷಣಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆ, ಅವರ ಮಾಹಿತಿಯನ್ನು ವಿಶ್ವವಿದ್ಯಾಲಯಕ್ಕೆ ನೀಡಬೇಕು. ಅವರಿಗೆ ವಾಸ್ತವ್ಯದ ವ್ಯವಸ್ಥೆಯನ್ನೂ ಕಾಲೇಜುಗಳು ಮಾಡಬಹುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.