ಶಿರಸಿ: ಜೇನು ಕೃಷಿ ಉತ್ತೇಜಿಸಲು ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದರೂ, ಜೇನು ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿಲ್ಲ. ಸರ್ಕಾರ ನೀಡುವ ಸೌಲಭ್ಯಗಳು ಅರ್ಹ ಫಲಾನುಭವಿಯ ಕೈ ಸೇರುತ್ತಿವೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಅಭಿಪ್ರಾಯಪಟ್ಟರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಶಿರಸಿ ಮತ್ತು ಯಲ್ಲಾಪುರ ತಾಲ್ಲೂಕು ಜೇನು ಸಾಕಣೆದಾರರ ಸಹಕಾರಿ ಸಂಘ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಇಲ್ಲಿ ನಡೆದ ಜೇನು ಕೃಷಿ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜೇನಿನ ಕುಟುಂಬ ಹೆಚ್ಚಾದರೆ, ತೋಟಗಾರಿಕಾ ಬೆಳೆಗಳ ಇಳುವರಿ ಕೂಡ ಹೆಚ್ಚಾಗುತ್ತದೆ. ಜೇನು ಕೃಷಿಗೆ ಸತತ ನಿಗಾವಹಿಸುವುದು ಅವಶ್ಯ. ಇದನ್ನು ಉಪ ಉದ್ಯೋಗವನ್ನಾಗಿ ಮಾಡಿಕೊಂಡರೆ ರೈತರ ಆದಾಯ ವೃದ್ಧಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಜೇನು ಪೆಟ್ಟಿಗೆ ವಿತರಣೆಯಾಗುತ್ತದೆ. ಆದರೆ, ಇದು ಸದ್ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿಲ್ಲ. ಹೀಗಾಗಿ, ಸೌಲಭ್ಯ ನೀಡಿದರೂ, ಈ ಕೃಷಿ ಯಲ್ಲಿ ವಿಶೇಷ ಪ್ರಗತಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೇನು ಕೃಷಿಕ ಮಧುಕೇಶ್ವರ ಹೆಗಡೆ ಮಾತನಾಡಿ, ‘ವಿವಿಧ ಸಮಸ್ಯೆಗಳ ಕಾರಣದಿಂದ ಜೇನು ಕೃಷಿ ಹಿನ್ನಡೆ ಅನುಭವಿಸುತ್ತಿದೆ. ಪರಿಸರ ಸಮತೋಲನ ತಪ್ಪಲು ಜೇನು ಕೃಷಿ ಮಾಡದಿರುವುದೇ ಕಾರಣವಾಗಿದೆ. ಕಾಡಿನಲ್ಲಿರುವ ಜೇನು ಕುಟುಂಬ ನಾಶ ಮಾಡಿ ಜೇನುತುಪ್ಪ ತೆಗೆಯುವ ಬದಲಾಗಿ, ಹಿತ್ತಲಿನಲ್ಲಿ ಪೆಟ್ಟಿಗೆಯಿಟ್ಟು ಜೇನು ಕೃಷಿ ಆರಂಭಿಸಿದರೆ ಕಾಡಿನ ಜೊತೆಗೆ ಜೇನು ಸಂತತಿಯೂ ಉಳಿಯುತ್ತದೆ’ ಎಂದು ಸಲಹೆ ಮಾಡಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಟಿ.ಹೆಗಡೆ ತಟ್ಟೀಸರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ಪ್ರಭಾವತಿ ಗೌಡ, ಉಷಾ ಹೆಗಡೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಟಿ.ಎಸ್.ಮೋಸೆಸ್, ಕೀಟಶಾಸ್ತ್ರಜ್ಞ ರಘುನಾಥ, ವಿಜ್ಞಾನಿ ರೂಪಾ ಪಾಟೀಲ ಇದ್ದರು. ರಾಜೇಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.