ADVERTISEMENT

ಬೆಳಗಾವಿ-ಗೋವಾ NH | ಕೆಸರಿನಲ್ಲಿ ಸಿಲುಕಿಕೊಂಡ ವಾಹನಗಳು: ಪರದಾಡಿದ ಸವಾರರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:27 IST
Last Updated 9 ಅಕ್ಟೋಬರ್ 2024, 14:27 IST
ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಹಾದು ಹೋಗಿರುವ ಬೆಳಗಾವಿ -ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತೋಲಿ ಸೇತುವೆ ಬಳಿ ರಸ್ತೆಯ ಕೆಸರಿನಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸಂಚಾರ ಬಂದ್ ಆಗಿತ್ತು
ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಹಾದು ಹೋಗಿರುವ ಬೆಳಗಾವಿ -ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತೋಲಿ ಸೇತುವೆ ಬಳಿ ರಸ್ತೆಯ ಕೆಸರಿನಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸಂಚಾರ ಬಂದ್ ಆಗಿತ್ತು   

ಜೊಯಿಡಾ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮನಗರದ ಅಸ್ತೋಲಿ ಸೇತುವೆ ಬಳಿ ರಾಮನಗರದಿಂದ ಹೊರಟ ಎರಡು ಭಾರಿ ವಾಹನಗಳು ಕೆಸರಿನಲ್ಲಿ ಸಿಲುಕಿದ್ದು, ಟೆಂಪೊ ಪಲ್ಟಿಯಾಗಿದ್ದರಿಂದ ಮಂಗಳವಾರ ರಾತ್ರಿಯಿಂದ ಸುಮಾರು 16 ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬುಧವಾರ ಬೆಳಿಗ್ಗೆ ಕ್ರೇನ್‌ಗಳ ಸಹಾಯದಿಂದ ಸಿಕ್ಕಿಬಿದ್ದ ವಾಹನಗಳನ್ನು ಹೊರತೆಗೆದು 11 ಗಂಟೆ ಸುಮಾರಿಗೆ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ರಾಮನಗರ ಸಮೀಪದ ಅಸ್ತೋಲಿ ಸೇತುವೆಯ ಬಳಿ ರಸ್ತೆ ಕಾಮಗಾರಿ ಭಾಗಶಃ ಸ್ಥಿತಿಯಲ್ಲಿದೆ. ಹೀಗಾಗಿ ಮಂಗಳವಾರ ಸಂಜೆಯ ನಂತರ ಸುರಿದ ಭಾರಿ ಮಳೆಗೆ ಇಲ್ಲಿನ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುವಾಗ ರಾತ್ರಿ 9 ಗಂಟೆ ಸುಮಾರಿಗೆ ಎರಡು ಭಾರಿ ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ. ಬೊಲೆರೋ ಟೆಂಪೋ ಸ್ಕಿಡ್ ಆಗಿ ಪಲ್ಟಿ ಹೊಡೆದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅಸ್ತೋಲಿ ಬಳಿ ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಭಾಗಗಳಿಂದ ಗೋವಾ ಕಡೆಗೆ ಹೋಗುವ ಕೆಲ ಬಸ್ ಗಳು ರಾಮನಗರ, ಖಾನಾಪುರ ಕಡೆಯಿಂದ ಹೆಮ್ಮಡಗಾ - ಅನಮೋಡ ಮಾರ್ಗವಾಗಿ ಗೋವಾ ಕಡೆಗೆ ತೆರಳಿದವು.

ADVERTISEMENT

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಂಚಾರ ದಟ್ಟ ತೆರವುಗೊಳಿಸಲು ಪೊಲೀಸರು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.