ADVERTISEMENT

ಅಡಿಕೆ ಕ್ಯಾನ್ಸರ್ ಕಾರಕ; ಆಧಾರವಿಲ್ಲದ ಅವೈಜ್ಞಾನಿಕ ವರದಿ- ಕಾಗೇರಿ

ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್ ಕಾರಕ ತೂಗುಗತ್ತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:18 IST
Last Updated 19 ನವೆಂಬರ್ 2024, 14:18 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ‘ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ಇಂಟರ್‌ ನ್ಯಾಶನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆ್ಯಂಡ್ ಕ್ಯಾನ್ಸರ್‌ ನೀಡಿರುವ ಅಡಿಕೆ ಕ್ಯಾನ್ಸರ್ ಕಾರಕ ಎಂಬುದು ಯಾವುದೇ ಆಧಾರವಿಲ್ಲದೆ ನೀಡಿದ ಅವೈಜ್ಞಾನಿಕ ವರದಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಜತೆ ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಗಂಭೀರ ಚಿಂತನೆ ಮಾಡುವ ಅಗತ್ಯತೆ ಇದೆ‘ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಈಗಾಗಲೇ ಕ್ಯಾಂಪ್ಕೊ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳು ಅಡಿಕೆ ಮೇಲೆ ಸಂಶೋಧನೆಗಳನ್ನು ಕೈಗೊಂಡು, ಅಡಿಕೆಯು ಕ್ಯಾನ್ಸರ್‌ ಕಾರಕವಲ್ಲ ಎಂಬ ವರದಿಯನ್ನು ನೀಡಿವೆ. ಔಷಧೀಯ ಗುಣಗಳು ಸಹ ಅಡಿಕೆಯಲ್ಲಿರುವ ಬಗ್ಗೆ ಉಲ್ಲೇಖಿಸಿವೆ. ಇಂತಹ ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಂಗಸಂಸ್ಥೆಯು ವರದಿ ನೀಡಿರುವುದು ಸಮಂಜಸವಲ್ಲ. ಈ ವಿಷಯಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಡಬ್ಲೂಎಚ್ಒ ಸಂಸ್ಥೆಗೆ ತಿಳಿಸುವ ಮತ್ತು ಅವರಿಗೆ ಮನವರಿಕೆಯನ್ನೂ ಸಹ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದಿದ್ದಾರೆ.

‘ಸಾವಿರಾರು ವರ್ಷಗಳಿಂದ ಅಡಿಕೆ ಬಳಕೆಯಲ್ಲಿದ್ದು ಪೂಜನೀಯ ಸ್ಥಾನದಲ್ಲಿದೆ. ತಂಬಾಕು ಬೇರ್ಪಟ್ಟ ಅಡಿಕೆ ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವುದು ಅನೇಕ ಸಂಶೋಧನೆಗಳಿಂದ ಹಾಗೂ ವೈಜ್ಞಾನಿಕವಾಗಿಯೂ ದೃಡಪಟ್ಟಿದೆ. ಈ ಅಂಶಗಳನ್ನು ಮತ್ತು ವೈಜ್ಞಾನಿಕ ಸಂಶೋಧನೆಯ ಅಂಶಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಈ ವಿಷಯಗಳ ಬಗ್ಗೆ ಸರ್ಕಾರದ ಮಟ್ಟದಲ್ಲೂ ಸಹ ಗಂಭೀರವಾಗಿ ಪ್ರಯತ್ನಿಸುವಂತೆ ಸಂಬಂಧಪಟ್ಟ ಸಚಿವರುಗಳಿಗೆ ಹಾಗೂ ಇಲಾಖೆಯ ಮುಖ್ಯಸ್ಥರಿಗೆ ಮನವರಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ. 

ADVERTISEMENT

‘ಈಗಾಗಲೇ ಕ್ಯಾಂಪ್ಕೊ ಸೇರಿದಂತೆ ರಾಜ್ಯದ ಪ್ರಮುಖ ಸಹಕಾರಿ ಸಂಘಗಳು ಮತ್ತು ಸಂಶೋಧನಾ ಸಂಸ್ಥೆಗಳು ಅಡಿಕೆ ಬೆಳೆಗಾರರ ಹಿತರಕ್ಷಣೆ ಕುರಿತಂತೆ ಸಕ್ರಿಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಆಗಾಗ ಅಡಿಕೆ ಮಾರುಕಟ್ಟೆಯನ್ನು ಅಸ್ಥರಿಗೊಳಿಸುವ ಇಂತಹ ಷಡ್ಯಂತ್ರಗಳನ್ನು ತಡೆಯಲು ಕೇಂದ್ರ ಹಣಕಾಸು, ವಾಣಿಜ್ಯ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಗತ್ಯವಾದ ಎಲ್ಲಾ ಕ್ರಮಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರೈತರು ಭಯಭೀತರಾಗುವ ಅಗತ್ಯವಿಲ್ಲ‘ ಎಂದಿದ್ದಾರೆ. 

‘ದೇಶದಲ್ಲಿಯೇ ಕರ್ನಾಟಕವು ಅತಿಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದ್ದು, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.