ಗೋಕರ್ಣ: ದಕ್ಷಿಣ ಭಾರತದ ಪ್ರಸಿದ್ಧ ಕಾಳಿ ದೇವಾಲಯ ಎಂದೇ ಖ್ಯಾತಿ ಪಡೆದ ‘ಭದ್ರಕಾಳಿ ದೇವಾಲಯ’ ಗೋಕರ್ಣದ ಪೂರ್ವ ದಿಕ್ಕಿನ ಪ್ರವೇಶದ್ವಾರದಲ್ಲೇ ಇದೆ. ಇಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ದೇಶದ ವಿವಿಧೆಡೆಯಿಂದ ಭಕ್ತರು ಪಾಲ್ಗೊಳ್ಳುವುದು ವಿಶೇಷ.
ನವರಾತ್ರಿ ಅಂಗವಾಗಿ ಪ್ರತಿ ದಿನ ಧಾರ್ಮಿಕ ಕಾರ್ಯಗಳೊಂದಿಗೆ ಸಂಜೆ ತಾಳಮದ್ದಲೆ, ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತದಂತಹ ಮನರಂಜನಾ ಕಾರ್ಯಕ್ರಮವೂ ಉತ್ಸವಕ್ಕೆ ಮೆರಗು ತರುತ್ತಿದೆ. ದಿನವೂ ವಿವಿಧ ರೀತಿಯ ಅಲಂಕಾರದಲ್ಲಿ ಭದ್ರಕಾಳಿ ಕಂಗೊಳಿಸುತ್ತ, ಭಕ್ತರನ್ನು ಆಕರ್ಷಿಸುತ್ತಿದೆ.
‘ಭದ್ರಕಾಳಿಯ ಉಲ್ಲೇಖವು ಅಸ್ಸಾಂನ ಗುವಾಹಟಿಯ ಕಾಮಾಖ್ಯಾ ದೇವಿಯ ಪುರಾಣದಲ್ಲಿಯೂ ಕಂಡು ಬರುತ್ತದೆ. ಭದ್ರಕಾಳಿಯು ಅಲ್ಲಿಯ ಪುರಾಣದಂತೆ ದೇವಿಯ ಕರ್ (ಕಿವಿ) ಸ್ಥಾನವಾಗಿದೆ’ ಎಂದು ಪುರಾಣದ ಕಥೆ ವಿವರಿಸುತ್ತಾರೆ ವಿದ್ವಾಂಸ ಗಣಪತಿ ಹಿರೇ.
‘ರಾಕ್ಷಸರ ಉಪಟಳ ಹೆಚ್ಚಾದಾಗಲೆಲ್ಲಾ ಒಂದಿಲ್ಲೊಂದು ಅವತಾರವಾಗಿ ಲೋಕ ಕಲ್ಯಾಣ ಮಾಡಿದ ಬಗ್ಗೆ ಪುರಾಣದಲ್ಲಿ ಅನೇಕ ದಾಖಲೆ ದೊರಕುತ್ತದೆ. ಸಿಂಧುದ್ವೀಪವನ್ನು ಆಳುತ್ತಿದ್ದ ನೇತ್ರಾಸುರನನ್ನು ಸಂಹರಿಸಲು ದೇವತೆಗಳು ದೇವಿಯನ್ನು ಸೃಷ್ಟಿಸಿದರು. ಆಕೆಯ ಕೈಗೆ ವಿಶೇಷ ಆಯುಧವೊಂದನ್ನು ನೀಡಿದರು. ನೇತ್ರಾಸುರನ್ನು ಸಂಹರಿಸಿದ ದುರ್ಗೆ ಮುಂದೆ ಭದ್ರಕಾಳಿಯಾಗಿ ಶುಂಭ ನಿಶುಂಭರನ್ನು ಸಂಹರಿಸಿದಳು. ತನಗೆ ವಹಿಸಿದ ಕೆಲಸ ಮುಗಿಸಿದ ಬಳಿಕ ಗೋಕರ್ಣಕ್ಕೆ ಬಂದು ನೆಲೆಸಿ, ತನ್ನ ಆಯುಧಗಳನ್ನೆಲ್ಲಾ ನೀರಿನಿಂದ ತೊಳೆದು ತಪಸ್ಸನ್ನಾಚರಿಸಲು ಸಂಕಲ್ಪಿಸಿ ಶತಶೃಂಗ ಗಿರಿಯ ತಟದಲ್ಲಿ ದಕ್ಷಿಣಾಭಿಮುಖವಾಗಿ ನೆಲೆಸಿದಳು. ಅದೇ ಭದ್ರಕಾಳಿ ದೇವಾಲಯವಾಗಿ ಮಾರ್ಪಟ್ಟಿತು’ ಎಂದೂ ವಿವರಿಸಿದರು.
ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದೆನಿಸಿರುವ ದೇವಾಲಯವು ದೇಶಾದ್ಯಂತ ಹಲವು ಭಕ್ತರನ್ನು ಹೊಂದಿದೆ. ಶರನ್ನವರಾತ್ರಿ ಮಹೋತ್ಸವ ಹಾಗೂ ವಸಂತ ನವರಾತ್ರಿ ಮಹೋತ್ಸವಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತದೆ. ಅದರಲ್ಲಿಯೂ ಶರನ್ನವರಾತ್ರಿಯೇ ಪ್ರಧಾನವಾದುದು. ಮಧ್ಯಾಹ್ನದ ನಂತರ ದೇವರ ದರ್ಶನಕ್ಕೆ ಲಭ್ಯವಿದ್ದು ದಿನವೂ ನೂರಾರು ಭಕ್ತರು ಆಗಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.