ಮುಂಡಗೋಡ (ಉತ್ತರ ಕನ್ನಡ): ‘ನಾವು ಹೊರಟಿರುವುದು ಯಾರನ್ನೋ ಗೆಲ್ಲಿಸಲಿಕ್ಕೆ ಅಲ್ಲ ಅಥವಾ ಕೇವಲ ಅಧಿಕಾರ ನಡೆಸುವುದಕ್ಕೂ ಅಲ್ಲ. ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ. ನಮ್ಮ ಎದುರು ಭಗವಾಧ್ವಜ ಯಾವತ್ತೂ ಹಾರಾಡಬೇಕು. ಅದಕ್ಕೆ ಜಗತ್ತು ಸಹ ಗೌರವ ಕೊಡಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಇಲ್ಲಿ ಸೋಮವಾರ ನಡೆದ ‘ಅವಲೋಕನ’ ಸಭೆಯಲ್ಲಿ ಅವರು ಮಾತನಾಡಿದರು.
‘ಯಾರು ಏನೇ ಹೇಳಲಿ. ನಾವು ಸಂಘಟನೆ ಕಟ್ಟಿರುವುದೇ ಧರ್ಮ, ಸಂಸ್ಕೃತಿ ಉಳಿಯಲಿ ಎಂದು. ಲಕ್ಷಾಂತರ ಕಾರ್ಯಕರ್ತರು ಅದಕ್ಕಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಗುರಿ ಮತ್ತು ಗುರು ಭಗವಾಧ್ವಜ ಆಗಿದೆ’ ಎಂದು ಅಭಿಪ್ರಾಯಪಟ್ಟರು.
‘ದೇಶದ ಎಲ್ಲ ಕಡೆ ಮೋದಿ ಅಲೆ ಇದೆ. ಸಂಘಟನೆ ಗಟ್ಟಿಯಾಗದ ಹೊರತು ಈ ಅಲೆಯನ್ನು ನಮ್ಮದಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಲಭವಾಗಿ ಆದಂತಹ ಚುನಾವಣೆ ರಾಜ್ಯದ ಬೇರೆ ಎಲ್ಲಿಯೂ ಆಗಿಲ್ಲ. ದೇಶದಲ್ಲಿ 300 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ. ಎನ್‌ಡಿಎ ಒಟ್ಟಾಗಿ 400ರ ಆಸುಪಾಸಿನಲ್ಲಿ ಬರುವ ಸಾಧ್ಯತೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಾವು ದೇಶ, ಧರ್ಮ, ಜನರ ಬೇಕು– ಬೇಡಗಳಿಗೆ ತಕ್ಕಂತೆ ರಾಜಕಾರಣ ಮಾಡುತ್ತಿದ್ದೇವೆ. ಸೋಗಲಾಡಿ ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಸರ್ಕಾರ ಮತ್ತು ಸಮಾಜದ ನಡುವೆ ಜೀವಂತ ಕೊಂಡಿಯಾಗಿ ಕೆಲಸ ಮಾಡಲು ರಾಜಕೀಯ ಪಕ್ಷದ ಕಾರ್ಯಕರ್ತರು ಇರಬೇಕು’ ಎಂದು ಅವರು ಹೇಳಿದರು.
‘ಸರ್ಕಾರ ನಡೆಸಲು ಬಹುಮತ ಬೇಕು. ಆದರೆ, ನಮ್ಮ ವಿರೋಧಿಗಳನ್ನು ಸಹ ಜೊತೆಗೆ ಕರೆದುಕೊಂಡು ಹೋಗುವ ಗುರಿಯಿದೆ. ನಮಗೆ ಬಹುಮತದಲ್ಲಿ ನಂಬಿಕೆ ಇಲ್ಲ, ಸರ್ವಮತದಲ್ಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.