ಗೋಕರ್ಣ: ಮಹಾರಾಷ್ರ್ಟದ ಗಂಧರ್ವ ಮಹಾವಿದ್ಯಾಲಯದ 2023-24ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಾದ ಭರತನಾಟ್ಯ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ಪಲ್ಲವಿ ಗಾಯತ್ರಿ ಶೇ 84.7 ಅಂಕ ಗಳಿಸುವ ಮೂಲಕ ಬೆಳಗಾವಿ ಕೇಂದ್ರಕ್ಕೆ ಪ್ರಥಮರಾಗಿದ್ಧಾರೆ. ಪರೀಕ್ಷಕರು ನೀಡುವ ವಿಶೇಷ ಯೋಗ್ಯತೆಗೆ ಪಾತ್ರರಾಗಿದ್ದಾರೆ.
ಪಲ್ಲವಿ ಗೋಪಾಲ ಗಾಯತ್ರಿ ಮೂಲತಃ ಗೋಕರ್ಣದವರು. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಭರತನಾಟ್ಯ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ಪ್ರಾಯಶಃ ಉತ್ತರ ಕನ್ನಡದಿಂದ ತೇರ್ಗಡೆ ಹೊಂದಿದ ಪ್ರಥಮ ವಿದ್ಯಾರ್ಥಿನಿಯಾಗಿದ್ದು, ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದು ಅವರ ನಾಟ್ಯ ಗುರು ನಯನಾ ಪ್ರಸನ್ನ ತಿಳಿಸಿದ್ದಾರೆ.
ಇದರ ಮುಂಚಿನ ಹಂತದ ವಿಶಾರದ ಪರೀಕ್ಷೆಯಲ್ಲಿ ಇವರು ರಾಷ್ಟ್ರಕ್ಕೆ ಪ್ರಥಮರಾಗಿದ್ದು, ಮುಂಬೈನಲ್ಲಿ ರಂಗನಾಥ ಬೇಂದ್ರೆ ಪುರಸ್ಕಾರ ನೀಡಿ ಗಂಧರ್ವ ಮಹಾವಿದ್ಯಾಲಯ ಪಲ್ಲವಿ ಅವರನ್ನು ಸನ್ಮಾನಿಸಿತ್ತು.
ಇವರು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ವಿದುಷಿ ನಯನ ಪ್ರಸನ್ನ ಇವರ ಬಳಿ 17 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು 2022ರ ಸಾಲಿನಲ್ಲಿ ನಡೆದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇ 90.8 ಅಂಕ ಗಳಿಸಿ ಅತ್ಯತ್ತಮ ಸಾಧನೆ ಮಾಡಿ ವಿದುಷಿಯಾಗಿದ್ದಾರೆ.
ಪಲ್ಲವಿ ಗಾಯತ್ರಿ ಪ್ರಸ್ತುತ ಬೆಂಗಳೂರಿನ ಜೈನ್ ವಿಶ್ವ ವಿದ್ಯಾಲಯದ ಮಾಸ್ಟರ್ ಇನ್ ಪರ್ಫಾರ್ಮಿಂಗ್ ಆರ್ಟ್ಸ್ ಸ್ನಾತಕೋತ್ತರ ಕೋರ್ಸ್ ಎರಡನೇ ಸೆಮಿಸ್ಟರ್ ಕಲಿಯುತ್ತಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ, 2021-22ನೇ ಸಾಲಿನಲ್ಲಿ ಪ್ರತಿಭಾವಂತ ಯುವ ಕಲಾವಿದರಿಗೆ ಎರಡು ವರ್ಷಗಳ ಕಾಲ ನೀಡುವ ವಿದ್ಯಾರ್ಥಿ ವೇತನದ ಭರತನಾಟ್ಯ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಒಟ್ಟು 31 ವಿದ್ಯಾರ್ಥಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಕರ್ನಾಟಕದ ಒಟ್ಟೂ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಏಕೈಕ ವಿದ್ಯಾರ್ಥಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.