ADVERTISEMENT

ಕಾರವಾರ: ಪ್ರವಾಸಿಗರ ಮನತಣಿಸುವ ‘ಭೀಮಕೋಲ’

ಕಲಾಕೃತಿ, ಜಲರಾಶಿ, ದಟ್ಟ ಅಡವಿಯನ್ನೊಳಗೊಂಡ ಅಪರೂಪದ ತಾಣ

ಗಣಪತಿ ಹೆಗಡೆ
Published 29 ಸೆಪ್ಟೆಂಬರ್ 2024, 5:29 IST
Last Updated 29 ಸೆಪ್ಟೆಂಬರ್ 2024, 5:29 IST
ಕಾರವಾರ ತಾಲ್ಲೂಕಿನ ಹೋಟೆಗಾಳಿ ಸಮೀಪದ ಭೀಮಕೋಲದ ಪಂಚವಟಿ ಉದ್ಯಾನದ ವಿಹಂಗಮ ನೋಟ
ಕಾರವಾರ ತಾಲ್ಲೂಕಿನ ಹೋಟೆಗಾಳಿ ಸಮೀಪದ ಭೀಮಕೋಲದ ಪಂಚವಟಿ ಉದ್ಯಾನದ ವಿಹಂಗಮ ನೋಟ   

ಕಾರವಾರ: ಸುತ್ತಲೂ ಹಸಿರು ಬೆಟ್ಟಗಳ ಸಾಲು, ಮಧ್ಯೆ ಸ್ವಚ್ಛ ನೀರಿನ ಕೊಳೆ, ಇನ್ನೊಂದೆಡೆ ವನ್ಯಜೀವಿಗಳ ಕಲಾಕೃತಿಗಳು, ವಿಭಿನ್ನ ಮಾದರಿಯ ಪ್ಯಾರಗೋಲ...ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಮನಸೆಳೆಯುವ ದೃಶ್ಯಗಳೇ ಗೋಚರಿಸುವ ತಾಣ ತಾಲ್ಲೂಕಿನ ಭೀಮಕೋಲದ ಪಂಚವಟಿ ಉದ್ಯಾನ.

ಎರಡು ವರ್ಷದ ಹಿಂದೆ ಪಾಚಿಗಟ್ಟಿದ ನೀರು, ಒಡೆದ ಅಣೆಕಟ್ಟೆಯ ಸ್ಲ್ಯಾಬ್‍ಗಳು, ಕೊರಕಲು ರಸ್ತೆಯಿಂದ ಕೂಡಿದ್ದ ಅಣೆಕಟ್ಟೆಯ ಪ್ರದೇಶವೀಗ ಸುಂದರ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಎರಡು ವರ್ಷಗಳಲ್ಲಿ ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಸೆಳೆದಿದೆ. ವಾರಾಂತ್ಯದ ವೇಳೆಯಲ್ಲಂತೂ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.

ಮಳೆಗಾಲ ಮುಗಿಯುತ್ತಿದ್ದಂತೆ ಬೀಳುವ ಬಿಸಿಲು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿದೆ. ಜಲರಾಶಿ, ಹಸಿರು ಸಿರಿಯ ನಡುವೆ ಕಾಲ ಕಳೆಯಲು ಕಾಂಕ್ರೀಟ್ ಬೆಂಚುಗಳನ್ನು ಅಳವಡಿಸಲಾಗಿದೆ. ಚಿರೇಕಲ್ಲಿನ ಪಥವೂ ನಿರ್ಮಾಣಗೊಂಡಿದೆ. ಇದು ಈ ಸ್ಥಳದ ಆಕರ್ಷಣೆ ಹೆಚ್ಚಿಸಿದೆ.

ADVERTISEMENT

ಉದ್ಯಾನಕ್ಕೆ ಆಕರ್ಷಕ ಪ್ರವೇಶದ್ವಾರವಿದೆ. ಅಲ್ಲಿಂದ ಚಿರೇಕಲ್ಲಿನಿಂದ ಸಿದ್ಧಪಡಿಸಿದ ಮೆಟ್ಟಿಲುಗಳನ್ನು ಏರಿ ಸಾಗಿದರೆ ಪುಟ್ಟದೊಂದು ಉದ್ಯಾನ ಎದುರಾಗುತ್ತದೆ. ಅಲ್ಲಿ ನವಿಲು, ಜಿಂಕೆಯಂತಹ ಆಕರ್ಷಕ ಪಕ್ಷಿ, ಪ್ರಾಣಿಗಳ ಕಲಾಕೃತಿಗಳು ಕಾಣಸಿಗುತ್ತವೆ. ಜತೆಗೆ ಹೂವು, ಹಣ್ಣಿನ ಗಿಡಗಳೂ ಇವೆ.

ದೂರದಿಂದ ನೋಡಿದರೆ ದೊಡ್ಡ ಗಾತ್ರದ ಅಣಬೆಯೊಂದು ಬೆಳೆದು ನಿಂತಂತೆ ಕಾಣಿಸುವ ಪ್ಯಾರಾಗೋಲ ಇಲ್ಲಿನ ಆಕರ್ಷಣೆಯ ಕೇಂದ್ರವೂ ಆಗಿದೆ.

ಕಾರವಾರ ನಗರದಿಂದ 14 ಕಿ.ಮೀ ದೂರದಲ್ಲಿರುವ ಈ ತಾಣಕ್ಕೆ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯ ಮೂಲಕ ಸಾಗಬೇಕು. ಹೋಟೆಗಾಳಿ ಬಳಿ ಎಡಕ್ಕೆ ತಿರುಗಿ, ಅಲ್ಲಿಂದ ಒಂದು ಕಿ.ಮೀ ದೂರ ಕ್ರಮಿಸಿದರೆ ಪಂಚವಟಿ ಉದ್ಯಾನ ವೀಕ್ಷಿಸಬಹುದು.

‘ಭೀಮಕೋಲ ಉದ್ಯಾನ ನಗರಕ್ಕೆ ಸಮೀಪವಿರುವ, ಕುಟುಂಬ ಸಮೇತರಾಗಿ ನೋಡಿಬರಬಹುದಾದ ಆಕರ್ಷಣೀಯ ತಾಣವಾಗಿದೆ. ನೀರು, ದಟ್ಟ ಕಾಡು, ಬೆಟ್ಟಗಳ ಸಾಲು, ಆಕರ್ಷಕ ಕಲಾಕೃತಿಗಳನ್ನೆಲ್ಲ ಒಂದೇ ಜಾಗದಲ್ಲಿ ನಿಂತು ನೋಡಲು ಇದು ಹೇಳಿ ಮಾಡಿಸಿದ ಸ್ಥಳವೆನಿಸಿದೆ. ಫೋಟೊ ಕ್ಲಿಕ್ಕಿಸಿಕೊಳ್ಳಲು ಇದಕ್ಕಿಂತ ಅದ್ಭುತ ತಾಣ ಇನ್ನೊಂದಿಲ್ಲ ಎಂಬಂತಿದೆ’ ಎಂದು ಹೇಳುತ್ತಾರೆ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿ ಬಂದಿರುವ ಎಂ.ಸಂತೋಷಕುಮಾರ್.

ಜಲಸಾಹಸ ಚಟುವಟಿಕೆ ನಡೆಸಲು ಯೋಜನೆ

‘ಅಮೃತ ಸರೋವರ ಯೋಜನೆ ಅಡಿಯಲ್ಲಿ ಭೀಮಕೋಲ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಲಾಗಿದೆ. ಇಲ್ಲಿನ ಕೆರೆಯಲ್ಲಿ ವರ್ಷದ ಬಹುತೇಕ ತಿಂಗಳು ನೀರು ತುಂಬಿಕೊಂಡಿರುತ್ತಿದ್ದು ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಇಲ್ಲಿ ಜಲಸಾಹಸ ಚಟುವಟಿಕೆ ನಡೆಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಹೇಳುತ್ತಾರೆ.

ಪಂಚವಟಿ ಉದ್ಯಾನ ನಿರ್ವಹಣೆಗೆ ಪ್ರತ್ಯೇಕ ಸಮಿತಿ ರಚನೆಯಾಗಿದ್ದು ನಾಲ್ಕೈದು ಸಿಬ್ಬಂದಿಗೆ ಉದ್ಯೋಗವೂ ಸಿಕ್ಕಿದೆ. ಪ್ರವಾಸಿಗರಿಂದ ಪಡೆಯುವ ಶುಲ್ಕದಲ್ಲಿ ಉದ್ಯಾನ ನಿರ್ವಹಣೆಯಾಗುತ್ತದೆ.
ಮಹೇಶ ಗಾವಡೆ ಹಣಕೋಣ, ಗ್ರಾಮ ಪಂಚಾಯಿತಿ ಪಿಡಿಒ
ಕಾರವಾರದ ಭೀಮಕೋಲದ ಪಂಚವಟಿ ಉದ್ಯಾನದ ದಾರಿ ಹಸಿರಿನಿಂದ ಕಂಗೊಳಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.