ಕಾರವಾರ: ಒಂದು ಅಡಿ ಅಗಲದ ರೆಕ್ಕೆಗಳುಳ್ಳ ಪತಂಗವೊಂದು (ಅಟ್ಲಾಸ್ ಮೋತ್) ಜೊಯಿಡಾ ತಾಲ್ಲೂಕಿನ ಕುಂಬಾರವಾಡದ ದಟ್ಟಾರಣ್ಯದಲ್ಲಿ ಕಂಡುಬಂದಿದೆ. ಇದು ಏಷ್ಯಾದಲ್ಲಿ ಪತ್ತೆಯಾದ ಅತಿದೊಡ್ಡ ಪತಂಗಗಳಲ್ಲಿ ಒಂದು ಎಂದು ಅಂದಾಜಿಸಲಾಗಿದೆ.
ಸಾಮಾನ್ಯವಾಗಿ ಪತಂಗಗಳು ಪಾತರಗಿತ್ತಿಗಳಿಗಿಂತ ದೊಡ್ಡದಾಗಿ ಇರುತ್ತವೆ. ಅವುಗಳ ಎರಡೂ ರೆಕ್ಕೆಗಳನ್ನು ಬಿಡಿಸಿದಾಗ ಸರಾಸರಿ 240 ಮಿಲಿಮೀಟರ್‌ಅಗಲ ಇರುತ್ತವೆ. ಅಪರೂಪಕ್ಕೆ 280 ಮಿಲಿಮೀಟರ್‌ವರೆಗೂ ಬೆಳೆಯುತ್ತವೆ. ಕುಂಬಾರವಾಡದ ಕಾಡಿನಲ್ಲಿ ಕಾಣಿಸಿಕೊಂಡಿರುವ ಪತಂಗದ ರೆಕ್ಕೆಗಳನ್ನು ಬಿಡಿಸಿದಾಗ 300 ಮಿಲಿಮೀಟರ್ (30 ಸೆ.ಮೀ) ಅಗಲವೆಂದು ದಾಖಲಾಗಿದೆ.
ಕಾಡಿನಂಚಿನಲ್ಲಿರುವ ಕಟ್ಟಡವೊಂದರಲ್ಲಿ ರಾತ್ರಿ ವಿದ್ಯುತ್ ದೀಪ ಬೆಳಗಿದಾಗ ಈ ಪತಂಗ ಆಕರ್ಷಿತವಾಗಿ ಹಾರಿ ಬಂದಿತ್ತು. ಅದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಅಳತೆಗೋಲು ಹಿಡಿದು ರೆಕ್ಕೆಗಳ ಉದ್ದ ಮತ್ತು ಅಗಲವನ್ನು ದಾಖಲಿಸಿದರು. ಅದು ತಲಾ 150 ಮಿಲಿಮೀಟರ್ ಉದ್ದ ಇರುವುದನ್ನೂ ಅವರು ಖಾತ್ರಿ ಪಡಿಸಿಕೊಂಡರು.
‘ನನ್ನ ಅನುಭವದಲ್ಲಿ ಇದು ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಪತಂಗ. ಅಟ್ಲಾಸ್ ಮೋತ್ ಪ್ರಭೇದವು ಪ್ರಪಂಚದಲ್ಲೇ ಅತಿ ದೊಡ್ಡದು.ಭಾರತ ಸೇರಿ ಏಷ್ಯಾದ ಬಹುತೇಕ ರಾಷ್ಟ್ರಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಇವುಗಳು ವಾಸಿಸುತ್ತವೆ’ ಎಂದು ಅವರು ಮಾಹಿತಿ ನೀಡಿದರು.
‘ಈ ಪತಂಗಗಳಿಗೆ ಕನ್ನಡದಲ್ಲಿ ನಿರ್ದಿಷ್ಟ ಹೆಸರಿಲ್ಲ. ರೆಕ್ಕೆಗಳ ತುದಿಯಲ್ಲಿ ಸರ್ಪದ ತಲೆಯಂತೆಭಾಸವಾಗುತ್ತದೆ. ಇದನ್ನು ಕಂಡು ಹಕ್ಕಿಗಳು, ಕಾಡಿನ ಹಲ್ಲಿಗಳು, ಓತಿಕ್ಯಾತ ಮುಂತಾದ ಪ್ರಾಣಿಗಳು ಹೆದರುತ್ತವೆ. ರೆಕ್ಕೆಗಳ ತುಂಬ ಕಪ್ಪು, ಕೆಂಪು, ಬೂದು, ಬಿಳಿ ಬಣ್ಣದ ಗಂಭೀರ ರಚನೆಗಳಿರುತ್ತವೆ. ಇವುಗಳನ್ನು ಕಂಡಾಗ ವೈರಿಗಳು ಬೇಟೆಯಾಡಲು ಹಿಂದೇಟು ಹಾಕುತ್ತವೆ’ ಎಂದೂ ತಿಳಿಸಿದರು.
ಕಂಬಳಿಹುಳವು ತನ್ನ ಸುತ್ತ ಗೂಡು ಕಟ್ಟಿಕೊಂಡು ಕೆಲವು ದಿನಗಳ ಬಳಿಕ ಪತಂಗವಾಗಿ ರೂಪಾಂತರವಾಗುತ್ತದೆ. ರೆಕ್ಕೆ ಬಲಿತು ಹಾರಲು ಶುರುಮಾಡಿದ ಬಳಿಕ ಗರಿಷ್ಠ ಒಂದು ವಾರದ ಜೀವಿತಾವಧಿ ಹೊಂದಿರುತ್ತದೆ. ಈ ಅವಧಿಯಲ್ಲಿ ಹೂವಿನಿಂದ ಹೂವಿಗೆ ಹಾರುತ್ತ ಪರಾಗಸ್ಪರ್ಶ ಮಾಡಿ ಕಾಡಿನ ವೃದ್ಧಿಗೂ ಅದು ತನ್ನದೇ ಆದ ಕೊಡುಗೆ ನೀಡುತ್ತದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.