ADVERTISEMENT

ಬಿಜೆಪಿ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿ: ಭೀಮಣ್ಣ ನಾಯ್ಕ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸವಾಲು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 10:09 IST
Last Updated 5 ಅಕ್ಟೋಬರ್ 2022, 10:09 IST
ಭೀಮಣ್ಣ ನಾಯ್ಕ
ಭೀಮಣ್ಣ ನಾಯ್ಕ   

ಶಿರಸಿ: ‘ಪರೇಶ್ ಮೇಸ್ತ ಸಾವಿನ ವಿಚಾರದಲ್ಲಿ ಗೊಂದಲ, ಭಯ ಸೃಷ್ಟಿಸಿದ್ದ ಬಿಜೆಪಿ ಜನರ ಕ್ಷಮೆ ಕೇಳಬೇಕು. ಹೆಣದ ಮೇಲೆ ರಾಜಕಾರಣ ಮಾಡಿ ಆಯ್ಕೆಯಾದ ಬಿಜೆಪಿ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿ ಜನಾದೇಶ ಪಡೆಯಲು ಮುಂದಾಗಲಿ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಸವಾಲೆಸೆದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರೇಶ್ ಸಾವಿನ ಬಳಿಕ ನಡೆದ ಗಲಭೆಯಲ್ಲಿ ಅಮಾಯಕ ಯುವಕರು ಕಷ್ಟಕ್ಕೆ ಸಿಲುಕಿದರು. ಬಿಜೆಪಿ ಮಾತ್ರ ಅಧಿಕಾರ ಅನುಭವಿಸಿತು. ಪರೇಶ್ ಸಾವಿನ ವಿಚಾರದಲ್ಲಿ ಪ್ರತಿಭಟನೆ ನಡೆಸಿ ಅಮಾಯಕರನ್ನು ಕಷ್ಟಕ್ಕೆ ದೂಡಿದ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಈಗ ತಮ್ಮ ಪ್ರತಿಕ್ರಿಯೆ ನೀಡಲಿ’ ಎಂದು ಸವಾಲು ಹಾಕಿದರು.

‘ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೇಶ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದರು. ಬಿಜೆಪಿ ಪರೇಶ್ ಕುಟುಂಬವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವ ಕ್ಷುಲ್ಲಕ ಕೆಲಸ ಮಾಡಿತ್ತು’ ಎಂದರು.

ADVERTISEMENT

‘ಬಿಜೆಪಿ ಭ್ರಷ್ಟಾಚಾರ, ದುರಾಡಳಿತದಿಂದ ಕಳಂಕ ತಂದುಕೊಂಡಿದೆ. ಮುಂದಿನ ಚುನಾವಣೆ ಎದುರಿಸಲು ಸೂಕ್ತ ವಿಷಯವೇ ಅವರಿಗಿಲ್ಲ’ ಎಂದರು.

‘ಅ.7 ರಂದು ಹೊನ್ನಾವರದಲ್ಲಿ ಪಕ್ಷದ ವತಿಯಿಂದ ಪರೇಶ್ ಸಾವಿನ ಪ್ರಕರಣದ ಕುರಿತು ಸತ್ಯವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು’ ಎಂದರು.

ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಜಗದೀಶ ಗೌಡ, ಬಸವರಾಜ ದೊಡ್ಮನಿ, ಮಂಜುನಾಥ ನಾಯ್ಕ, ರಘು ಕಾನಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.