ಕಾರವಾರ: ಚುನಾವಣಾ ಅಧಿಕಾರಿಯ ಅನುಮತಿ ದೊರೆಯುವ ಮುನ್ನವೇ ಆರಂಭಿಸಲಾಗಿದ್ದ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಚೇರಿಯನ್ನು ವಿಚಕ್ಷಣ ದಳದ ಅಧಿಕಾರಿಗಳು ಶನಿವಾರ ಬಾಗಿಲು ಮುಚ್ಚಿಸಿದರು.
ಹೈಚರ್ಚ್ ರಸ್ತೆಯಲ್ಲಿರುವ ಖಾಸಗಿ ಹೊಟೆಲ್ ಕಟ್ಟಡದ ನೆಲಮಹಡಿಯಲ್ಲಿ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಲಾಗಿತ್ತು. ಪಕ್ಷದ ಅಭ್ಯರ್ಥಿ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು. ಕಚೇರಿ ತೆರೆಯಲಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ ವಿಚಕ್ಷಣ ದಳದ ಅಧಿಕಾರಿಗಳು ಪರವಾನಿಗೆ ಸಿಗುವವರೆಗೂ ಕಚೇರಿ ಆರಂಭಿಸದಿರಲು ಸೂಚಿಸಿದರು. ಹೀಗಾಗಿ ಕಚೇರಿ ಬಾಗಿಲು ಮುಚ್ಚಲಾಯಿತು.
‘ಬೇರೊಂದು ಕಡೆಯಲ್ಲಿ ಕಚೇರಿ ತೆರೆಯಲು ಶುಕ್ರವಾರ ಅನುಮತಿ ಅರ್ಜಿ ಸಲ್ಲಿಸಿದ್ದರು. ನಂತರ ಕಚೇರಿ ಸ್ಥಳ ಬದಲಿಸುವುದಾಗಿ ತಿಳಿಸಿ ಅರ್ಜಿ ಹಿಂಪಡೆದಿದ್ದರು. ಶನಿವಾರ ಪರವಾನಿಗೆಗೆ ಹೊಸದಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಕಚೇರಿ ಉದ್ಘಾಟಿಸಿದ ಬಳಿಕ ಅರ್ಜಿ ಬಂದಿರುವುದು ಗಮನಕ್ಕೆ ಬಂದ ಕಾರಣ ಪರವಾನಿಗೆ ಸಿಗುವವರೆಗೆ ತೆರೆಯದಂತೆ ಕ್ರಮವಹಿಸಲಾಗಿದೆ’ ಎಂದು ಕ್ಷೇತ್ರದ ಚುನಾವಣಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಪ್ರತಿಕ್ರಿಯಿಸಿದರು.
‘ಸಾಂಕೇತಿಕವಾಗಿ ಕಚೇರಿಯನ್ನು ತೆರೆಯಲಾಗಿತ್ತು. ಅನುಮತಿ ಸಿಕ್ಕ ಬಳಿಕ ಅಧಿಕೃತವಾಗಿ ಆರಂಭಿಸುವವರಿದ್ದೆವು. ಕಚೇರಿಯಲ್ಲಿ ಪಕ್ಷದ ಯಾವ ಚಟುವಟಿಕೆಯೂ ನಡೆದಿರಲಿಲ್ಲ. ಪೀಠೋಪಕರಣ, ಇಂಟರನೆಟ್ ಸಂಪರ್ಕ ಪಡೆಯುವ ಕೆಲಸ ನಡೆದಿತ್ತು. ಅಧಿಕಾರಿಗಳಿಗೂ ಇದನ್ನು ಮನವರಿಕೆ ಮಾಡಲಾಯಿತು. ನಿಯಮ ಮೀರಿ ನಡೆದಿಲ್ಲ’ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.