ಕಾರವಾರ: ಏಕಕಾಲಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಯಲ್ಲಿದ್ದು ಎರಡೂ ಹುದ್ದೆಯಿಂದ ಆರ್ಥಿಕ ಲಾಭ ಮಾಡಿಕೊಂಡ ಕಾರಣಕ್ಕೆ ಬಿಜೆಪಿ ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಉಷಾ 2010ರಲ್ಲಿ ಬದನಗೋಡ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಅದೇ ವೇಳೆ ಅವರು ಅಂಗನವಾಡಿಯೊಂದರಲ್ಲಿಯೂ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಕುರಿತು ವ್ಯಕ್ತಿಯೊಬ್ಬರು ನೀಡಿದ್ದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ಎಂ. ಪ್ರಭು ವಾದ ಮಂಡಿಸಿದ್ದರು.
ಪ.ಪಂ. ಮಾಜಿ ಸದಸ್ಯನಿಗೆ 2 ವರ್ಷ ಜೈಲು
ಕಾರವಾರ: ಮನೆಯ ಗೋಡೆ ಉಳಿಸಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆದಿದ್ದ ಯಲ್ಲಾಪುರ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದ ರವಿ ಸೋಮಯ್ಯ ದೇವಾಡಿಗ ಎಂಬುವವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಯಲ್ಲಾಪುರ ಪಟ್ಟಣದ ನಾಯ್ಕನಕೆರೆ ವಾರ್ಡಿನ ಸದಸ್ಯರಾಗಿದ್ದ ವೇಳೆ 2010ರಲ್ಲಿ ರವಿ ಚರಂಡಿ ಕಾಮಗಾರಿಗೆ ತೆರವುಗೊಳ್ಳಬೇಕಿದ್ದ ನರಸಿಂಹ ಭಟ್ಟ ಎಂಬುವವರ ಮನೆಯ ಗೋಡೆ ಉಳಿಸಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹4,500 ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ರವಿ ಅವರನ್ನು ವಶಕ್ಕೆ ಪಡೆದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ಎಂ.ಪ್ರಭು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.