ಮುಂಡಗೋಡ: ಹಳಬರು ಹಾಗೂ ವಲಸಿಗರು ಎಂಬ ತಿಕ್ಕಾಟದ ನಡುವೆಯೇ ತಾಲ್ಲೂಕಿನಲ್ಲಿ ಬಿ.ಜೆ.ಪಿ ಗಟ್ಟಿಯಾಗಿದೆ ಎಂದು ತೋರಿಸಲು ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಕಾರ್ಯಕರ್ತರ, ಪದಾಧಿಕಾರಿಗಳ ಸಭೆಯನ್ನು ಶನಿವಾರ ನಡೆಸಲಾಗಿದೆ.
ಮಾಜಿ ಶಾಸಕ ವಿ.ಎಸ್.ಪಾಟೀಲ ಕಾಂಗ್ರೆಸ್ ಸೇರ್ಡೆಯಾದರೆ, ಕಾರ್ಯಕರ್ತರು ಯಾರೂ ಅವರ ಹಿಂದೆ ಹೋಗುವುದಿಲ್ಲ ಎಂದು ಸಭೆಯಲ್ಲಿ ಒತ್ತಿ ಹೇಳುವ ಮೂಲಕ, ಕಾರ್ಯಕರ್ತರನ್ನು ಒಂದುಗೂಡಿಸುವ ಪ್ರಯತ್ನವನ್ನೂ ಮಾಡಲಾಗಿದೆ.
ಬೂತ್ ಮಟ್ಟದ ಹಾಗೂ ಮಹಾಶಕ್ತಿ ಕೇಂದ್ರದ ಸಭೆ ಹೊರತುಪಡಿಸಿದರೆ, ತಾಲ್ಲೂಕು ಮಟ್ಟದ ಕಾರ್ಯಕರ್ತರ ಸಭೆ ಬರೋಬ್ಬರಿ ಎರಡು ವರ್ಷಗಳ ನಂತರ ಮೊದಲ ಬಾರಿಗೆ ನಡೆದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಸಹಿತ ವಿವಿಧ ಸ್ಥರಗಳ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಸಚಿವ ಶಿವರಾಮ ಹೆಬ್ಬಾರ ಅವರು ಈಚೆಗೆ ವಿದೇಶ ಪ್ರವಾಸ ಕೈಗೊಂಡಿದ್ದರು. ಅದೇ ಸಂದರ್ಭದಲ್ಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ವಿ.ಎಸ್.ಪಾಟೀಲ ಕಾಂಗ್ರೆಸ್ ಸೇರ್ಪಡೆಯ ಸುದ್ದಿ ದಟ್ಟವಾಗಿತ್ತು. ಅವರೂ ‘ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರುತ್ತೇನೆ’ ಎಂದು ಸ್ಪಷ್ಟಪಡಿಸಿದ್ದರು. ಇದು ಬಿ.ಜೆ.ಪಿ.ಯಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.
ಶಿವರಾಮ ಹೆಬ್ಬಾರ ವಿದೇಶದಿಂದ ಮರಳಿ ಬಂದವರೇ ತಾಲ್ಲೂಕಿನ ಬಿ.ಜೆ.ಪಿ ಮುಖಂಡರು, ಕಾರ್ಯಕರ್ತರನ್ನು ನಿರಂತರವಾಗಿ ಭೇಟಿ ಮಾಡಿದರು. ಅಲ್ಲದೇ ಅವರ ಮಗ ವಿವೇಕ ಹೆಬ್ಬಾರ ಕೂಡ ಕ್ಷೇತ್ರದ ತುಂಬ ಸಂಚರಿಸಿ ಮುಖಂಡರ ವಿಶ್ವಾಸ ಗಟ್ಟಿಗೊಳಿಸಲು ಯತ್ನಿಸಿದ್ದಾರೆ. ಜೊತೆಗೇ ಕಾರ್ಯಕರ್ತರ ಸಮಾವೇಶವನ್ನೂ ಮಾಡಿ, ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.
ವಿ.ಎಸ್.ಪಾಟೀಲ ಬಿ.ಜೆ.ಪಿ ಬಿಟ್ಟು ಹೋದರೆ ಪಕ್ಷದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಗಬಹುದಾದ ಬೆಳವಣಿಗೆಯನ್ನು ಈಗಲೇ ಊಹಿಸುವುದು ಕಷ್ಟ ಎಂದು ಹಿರಿಯ ಕಾರ್ಯಕರ್ತರು ಹೇಳುತ್ತಾರೆ.
ಪೂರ್ಣ ಒಪ್ಪಲು ಹಿಂದೇಟು:
‘ಹಳೆ ನೀರು ಹರಿದು ಹೋಗಿ, ಹೊಸ ನೀರು ಬರುತ್ತಿದೆ. ಹೋಗುವ ನೀರನ್ನು ತಡೆಗಟ್ಟುವ ಶಕ್ತಿ ನಮಗಿಲ್ಲ. ಆದರೆ, ಬರುವ ಹೊಸ ನೀರನ್ನು ಕಟ್ಟಿ ಗಟ್ಟಿಗೊಳಿಸುವ ಶಕ್ತಿಯಿದೆ’ ಎಂದು ಶಿವರಾಮ ಹೆಬ್ಬಾರ ಸಭೆಯಲ್ಲಿ ಹೇಳಿದ್ದರು.
ಈ ಮೂಲಕ ವಿ.ಎಸ್.ಪಾಟೀಲ ಪಕ್ಷ ಬಿಡುವ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ವಿ.ಎಸ್.ಪಾಟೀಲ ಬಿ.ಜೆ.ಪಿ.ಗೆ ಅನಿವಾರ್ಯವಲ್ಲ ಎನ್ನುವ ಸಂದೇಶವನ್ನು ಕೆಲವು ಮುಖಂಡರು ನೀಡಿದರೂ ಇದನ್ನು ಮೂಲ ಬಿ.ಜೆ.ಪಿ.ಗರು ಪೂರ್ತಿ ಮನಸ್ಸಿನಿಂದ ಒಪ್ಪಲು ಹಿಂದೇಟು ಹಾಕುತ್ತಿದ್ದಾರೆ.
* ಮುಂದಿನ ಚುನಾವಣೆಗೆ ಈಗಿನಿಂದಲೇ ರಣಕಹಳೆ ಮೊಳಗಿಸಲಾಗಿದೆ. ಯಾವ ಕಾರ್ಯಕರ್ತರೂ ಬಿ.ಜೆ.ಪಿ ಬಿಟ್ಟು ಹೋಗುವುದಿಲ್ಲ.
- ವಿಠ್ಠಲ ಬಾಳಂಬೀಡ, ಪ್ರಧಾನ ಕಾರ್ಯದರ್ಶಿ, ತಾಲ್ಲೂಕು ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.