ADVERTISEMENT

ಕಾರವಾರ | ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 7:21 IST
Last Updated 28 ಜೂನ್ 2024, 7:21 IST
   

ಕಾರವಾರ: ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣವನ್ನು ಲೂಟಿ ಹೊಡೆದು ಪರಿಶಿಷ್ಟ ಜನರಿಗೆ ಕಾಂಗ್ರೆಸ್ ವಂಚಿಸಿದೆ ಎಂದು ಆರೋಪಿಸಿ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬ್ಯಾರಿಕೇಡ್‌ಗಳನ್ನು ತಳ್ಳಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದು, ಪೊಲೀಸ್ ಮೈದಾನಕ್ಕೆ ಕರೆದೊಯ್ದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರು ಕಷ್ಟಪಡುವಂತಾಗಿದೆ. ಬೆಲೆ ಏರಿಕೆ ಮಾಡಿ ಜನರನ್ನು ಪೀಡಿಸಿದರೆ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೊಳ್ಳೆ ಹೊಡೆದಿದೆ' ಎಂದರು.

ADVERTISEMENT

'ಪರಿಶಿಷ್ಟರ ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಗ್ಯಾರಂಟಿ ಯೋಜನೆ ನೆಪದಲ್ಲಿ ಪರಿಶಿಷ್ಟರ ಅನುದಾನ ಕಸಿದಿದ್ದ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನೂ ಲೂಟಿ ಮಾಡಿದೆ' ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಆರೋಪಿಸಿದರು.

ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ ಚಲವಾದಿ, 'ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಸರ್ಕಾರ ನಿಗಮದ ಹಣವನ್ನು ಲೋಕಸಭೆ ಚುನಾವಣೆಗೆ ಬಳಸಿಕೊಂಡಿದೆ. ಶೋಷಿತರ ಏಳ್ಗೆಗೆ ಮೀಸಲಿಟ್ಟ ಹಣವನ್ನು ಕೊಳ್ಳೆ ಹೊಡೆದು ವಂಚಿಸಿದೆ' ಎಂದು ಆರೋಪಿಸಿದರು.

ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ ಬೋರ್ಕರ್, 'ಸಂವಿಧಾನ ಎತ್ತಿ ಹಿಡಿಯುತ್ತೇವೆ ಎಂದು ಅಧಿಕಾರ ಹಿಡಿದ ಕಾಂಗ್ರೆಸ್ ಪರಿಶಿಷ್ಟರನ್ನು ಶೋಷಿಸಲು ಹೊರಟಿದೆ' ಎಂದರು.

ಪ್ರಮುಖರಾದ ರಾಜೇಂದ್ರ ನಾಯ್ಕ, ನಾಗರಾಜ ನಾಯಕ, ಗುಡ್ಡಪ್ಪ ತಳವಾರ, ಮಂಜುಳಾ ಮುಕ್ರಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.