ADVERTISEMENT

ದೇಶ, ಧರ್ಮ ಉಳಿಯಲು ಬಿಜೆಪಿ ಗೆಲುವು ಅಗತ್ಯ: ಸಂಸದ ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 12:50 IST
Last Updated 23 ಫೆಬ್ರುವರಿ 2024, 12:50 IST
ಮುಂಡಗೋಡ ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು
ಮುಂಡಗೋಡ ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು   

ಮುಂಡಗೋಡ: ಕೋವಿಡ್‌ ಸಮಯದಲ್ಲಿ ಕೇಂದ್ರ ಸರ್ಕಾರ ಇಲ್ಲದಿದ್ದರೆ ಕೋಟ್ಯಂತರ ಜನರ ಸಾವು ಆಗುತ್ತಿತ್ತು. ಜಗತ್ತಿನಲ್ಲಿ ನಮಗೆ ಯಾರೂ ಸಹಾಯ ಮಾಡುವವರು ಇರಲಿಲ್ಲ. ಆದರೆ, ಇಡೀ ಜಗತ್ತಿಗೆ ಲಸಿಕೆ ನೀಡಿ ಭಾರತ ಸಹಾಯ ಮಾಡಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ. ಬಂದರು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆದಿವೆ. ಕೆಲವರಿಗೆ ದಿನ ಕಳೆಯುವುದರೊಳಗೆ ಅಭಿವೃದ್ಧಿ ಕೆಲಸಗಳು ಆಗಿಬಿಡಬೇಕು ಎಂಬ ಕನಸು ಕಾಣುತ್ತಾರೆ ಎಂದರು.

ಕುಮಟಾ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಕೆಲಸ ರಾಜ್ಯ ಸರ್ಕಾರ ಮಾಡಬೇಕು. 40 ಕಿ.ಮೀ ಒಳಗಡೆ ಎರಡು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದಿಲ್ಲ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಯಾರು ಅಭ್ಯರ್ಥಿ ಆಗುತ್ತಾರೋ ಗೊತ್ತಿಲ್ಲ. ಆದರೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ದೇಶ, ಧರ್ಮ ಉಳಿಯಬೇಕೆಂದರೆ ಮೋದಿ ಗೆಲ್ಲಬೇಕು. 400ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಬೇಕು ಎಂದರು.

ADVERTISEMENT

ಹಿಂದೂಗಳು ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು ಚರ್ಚ್‌, ಮಸೀದಿಗಳಿಗೆ ಕೊಡುತ್ತಿದ್ದಾರೆ. ಅಲ್ಪ ಸ್ವಲ್ಪ ಕೊಟ್ಟರೆ ಅಭ್ಯಂತರವಿಲ್ಲ. ಮಸೀದಿ ಒಳಗೆ ಮಾತ್ರ ದೇವರಿದ್ದಾನೆಯೇ. ಹಿಂದೂಗಳ ಗುಡಿಯಲ್ಲಿ ದೇವರಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದನ್ನು ಕೇಳಿದರೆ ಅನಂತಕುಮಾರ ಹೆಗಡೆ ಕೋಮುವಾದಿ ಎನ್ನುತ್ತಾರೆ. ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಅದಕ್ಕೆ ಧನ್ಯವಾದ ಹೇಳಿದ್ದೇನೆ. ತುಂಬಾ ದಿನವಾಗು ಪ್ರಕರಣ ದಾಖಲಾಗಿದ್ದಿಲ್ಲ. ಆರೋಗ್ಯನೂ ಸರಿಯಿರಲಿಲ್ಲ. ಕೇಸ್‌ ಇದ್ದರೆ ಆರೋಗ್ಯನೂ ಸುಧಾರಿಸುತ್ತೆ ಎಂದರು.

ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್‌.ಟಿ. ಪಾಟೀಲ ಮಾತನಾಡಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಮಾಜಿ ಶಾಸಕ ಸುನೀಲ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ತುಕಾರಾಮ ಇಂಗಳೆ, ಮಹೇಶ ಹೊಸಕೊಪ್ಪ, ರಮೇಶ ಜಿಗಳೇರ, ಗೋವಿಂದ ನಾಯ್ಕ, ಭರತರಾಜ ಹದಳಗಿ, ಬಸವರಾಜ ತನಖೆದಾರ, ಪಿ.ಜಿ.ತಂಗಚ್ಚನ್‌, ರವಿ ಕಲಘಟಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.