ADVERTISEMENT

ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ಹೆಬ್ಬಾರ್‌

ತಾಲ್ಲೂಕು ಮಟ್ಟದ ಜನಸ್ಪಂದನ: ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:23 IST
Last Updated 2 ಜುಲೈ 2024, 14:23 IST
ಯಲ್ಲಾಪುರದಲ್ಲಿ ನಡೆದ ಜನಸ್ಪಂದನ ಕಾಯ೯ಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್‌ ಉದ್ಘಾಟಿಸಿದರು
ಯಲ್ಲಾಪುರದಲ್ಲಿ ನಡೆದ ಜನಸ್ಪಂದನ ಕಾಯ೯ಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್‌ ಉದ್ಘಾಟಿಸಿದರು   

ಯಲ್ಲಾಪುರ: ಕಾಮಗಾರಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವಾರದ ಗಾಂಧಿ ಕುಟೀರದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಲೋಕೋಪಯೋಗಿ, ಜಲ ಜೀವನ ಮಿಷನ್‌, ಜಿಲ್ಲಾ ಪಂಚಾಯ್ತಿಯ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ಪಡೆದವರು ಒಂದೆರಡು ವರ್ಷವಾದರೂ ಕಾಮಗಾರಿ ಆರಂಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ಅವರು ಈ ಸೂಚನೆ ನೀಡಿದರು.

ADVERTISEMENT

ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಕೃಷಿ ಭೂಮಿಗಳು ವಸತಿ ನಿವೇಶನಗಳಾಗಿ ಪರಿವರ್ತನೆ ಆಗುತ್ತಿವೆ. ಅನೇಕ ಕಡೆ ರಸ್ತೆ, ವಿದ್ಯುತ್‌, ಗಟಾರ ಮುಂತಾದ ಮೂಲ ಸೌಕರ್ಯ ಕಲ್ಪಿಸದೇ ಮಾರಾಟ ನಡೆದಿದೆ. ಈ ಕುರಿತು ಪಟ್ಟಣ ಪಂಚಾಯ್ತಿ ಗಮನ ಹರಿಸಬೇಕು ಎಂದರು.

ಸರ್ಕಾರದ ಎಲ್ಲ ಯೋಜನೆಗಳು ಅರ್ಹರನ್ನು ತಲುಪಬೇಕು. ತಮ್ಮ ಪ್ರದೇಶದಲ್ಲಿ ಗೃಹಲಕ್ಷ್ಮಿ  ಯೋಜನೆಗೆ ಅರ್ಹ ಫಲಾನುಭವಿಗಳು ಇದ್ದರೆ ಅವರಿಗೆ ಯೋಜನೆ ತಲುಪಿಸಬೇಕಾದದ್ದು ಇಲಾಖೆಯ ಜವಾಬ್ದಾರಿ ಎಂದರು.

ತಹಶೀಲ್ದಾರ್‌ ಅಶೋಕ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಧಿಕಾರಿಗಳು ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು ಎಂದರು.

ಭೂಕುಸಿತ ಸಂಭವಿಸಿದ ಕಳಚೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬೀಗಾರ- ಬಾಗಿನಕಟ್ಟಾ ಮೂಲಕ ಬದಲಿ ಮಾರ್ಗ ನಿರ್ಮಿಸಿ ಎರಡು ವಷ೯ವಾಗಿದ್ದರೂ ಆ ಲೈನ್‌ ಚಾರ್ಜ್‌ ಮಾಡಲಾಗಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಉಮೇಶ ಭಾಗ್ವತ ಆಕ್ಷೇಪಿಸಿದರು.

ಕೆಇಬಿಯವರು ಗ್ರಾಮಾಂತರ ಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆ. ಸಮರ್ಪಕವಾಗಿ ವಿದ್ಯುತ್‌ ಪೂರೈಸುತ್ತಿಲ್ಲ ಎಂದು ನಿರಂಜನ ಹೆಗಡೆ ಆರೋಪಿಸಿದರು.

ಆನಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಪರಿಶಿಷ್ಟ ಪಂಗಡದವರ ಮನೆಯ ಮೇಲೆಯೇ ವಿದ್ಯತ್‌ ತಂತಿ ಹಾದು ಹೋಗಿದ್ದು ಲೈನ್‌ ಬದಲಿಸಿಕೊಡುವಂತೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕುಸುಮಾ ಸಿದ್ದಿ ಒತ್ತಾಯಿಸಿದರು.

ಪಟ್ಟಣ ವ್ಯಾಪ್ತಿಯ ಸವಣಗೇರಿಗೆ ಮಂಚಿಕೇರಿಯಿಂದ ವಿದ್ಯುತ್‌ ಪೂರೈಕೆಯಾಗುತ್ತಿರುವ ಕಾರಣ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಸವಣಗೇರಿಗೆ ಪಟ್ಟಣದಿಂದಲೇ ವಿದ್ಯುತ್‌ ಪೂರೈಸಿ ಎಂದು ಸವಣಗೇರಿಯ ಗಣೇಶ ಹೆಗಡೆ ಆಗ್ರಹಿಸಿದರು.

ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಕ್ವಾಟರ್ಸ್‌ ಇಲ್ಲದಿರುವುದು ತೊಂದರೆಯಾಗಿದೆ. ಕಾರಣ ಕ್ವಾಟರ್ಸ್‌  ವ್ಯವಸ್ಥೆಗೊಳಿಸುವಂತೆ ಸಾರಿಗೆ ಇಲಾಖೆಯ ಸಿಬ್ಬಂದಿಯ ಕುಟುಂಬಸ್ಥರು ಮನವಿ ಮಾಡಿದರು.

ಮಳಲಗಾವ, ಉಪಳೇಶ್ವರ, ಜಂಬೇಸಾಲ, ಹುತ್ಕಂಡ ಮಾಗ೯ವಾಗಿ ಪ್ರತಿನಿತ್ಯ 80ಕ್ಕೂ ಅಧಿಕ ವಿದ್ಯಾಥಿ೯ಗಳು ಯಲ್ಲಾಪುರಕ್ಕೆ ಬರುತ್ತಾರೆ. ಕಾರಣ ಯಲ್ಲಾಪುರದಿಂದ ಮಳಲಗಾಂವ್‌ಗೆ ಬಸ್‌ ಬಿಡಬೇಕೆಂದು ದ್ಯಾಮಣ್ಣ ಭೋವಿವಡ್ಡರ್‌ ಒತ್ತಾಯಿಸಿದರು.

ತಾಲ್ಲೂಕು ಪಂಚಾಯ್ತಿ ಇಒ ಎನ್‌.ಆರ್‌.ಹೆಗಡೆ, ಇಡಗುಂದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಕಾಂತ ಶೆಟ್ಟಿ , ಆನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಭಟ್, ವಜ್ರಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭಗೀರಥ ನಾಯ್ಕ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಆರ್. ಎಸ್. ಭಟ್ ಇದ್ದರು.

ಜನಸ್ಪಂದನದಲ್ಲಿ ವಿವಿಧ ಇಲಾಖೆಯಿಂದ ಒಟ್ಟು 43 ಅರ್ಜಿ ಸಲ್ಲಿಕೆಯಾಗಿದ್ದವು. ಆ ಪೈಕಿ ಕಂದಾಯ ಇಲಾಖೆಯ 17 ಅಜಿ೯ಗಳನ್ನು ಸ್ಥಳದಲ್ಲಿಯೇ ಇತ್ಯಥ೯ಪಡಿಸಿ ಮಂಜೂರಾತಿ ಆದೇಶಪತ್ರ ವಿತರಿಸಲಾಯಿತು.

ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಸಾರ್ವಜನಿಕರಿಗೆ ಸಸಿ, ವಿವಿಧ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.