ಕಾರವಾರ: ಹೊನ್ನಾವರ ತಾಲ್ಲೂಕಿನ ಕಾಸರಕೋಡು ಸೇರಿದಂತೆ ದೇಶದ ಎಂಟು ಕಡಲತೀರಗಳಲ್ಲಿ, ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಅನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ ಜಾವಡೇಕರ್ ಸೋಮವಾರ ಅನಾವರಣಗೊಳಿಸಿದರು.
ವರ್ಚುವಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ 100 ಕಡಲತೀರಗಳನ್ನು ಮುಂದಿನ 3–4 ವರ್ಷಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಎಂಟು ಕಡಲತೀರಗಳಲ್ಲಿ ಬ್ಲೂ ಫ್ಲ್ಯಾಗ್ ಅನಾವರಣಗೊಳಿಸಿದ್ದು ಅತ್ಯಂತ ಹೆಮ್ಮೆಯ ಕ್ಷಣಗಳಾಗಿವೆ’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವುದು, ಭಾರತವು ಕಡಲತೀರದ ಗುಣಮಟ್ಟ ಕಾಪಾಡಲು ಕೈಗೊಂಡಿರುವ ಕ್ರಮಗಳು ಮತ್ತು ಸುಸ್ಥಿರ ಅಭಿವೃದ್ಧಿಯ ಸೂಚಕವಾಗಿದೆ. ಪ್ರವಾಸೋದ್ಯಮ ಹಾಗೂ ಸಮುದ್ರ ಮಾಲಿನ್ಯ ತಡೆಯುವ ದೃಷ್ಟಿಯಿಂದ ಕಡಲತೀರಗಳ ಸ್ವಚ್ಛತೆಯು ಜನಾಂದೋಲನ ಆಗಬೇಕಿದೆ’ ಎಂದು ಅವರು ಆಶಿಸಿದರು.
ಕಾರ್ಯಕ್ರಮದ ಭಾಗವಾಗಿ ಕಾಸರಕೋಡಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಬ್ಲೂ ಫ್ಲ್ಯಾಗ್ ಹಾಗೂ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಡೆನ್ಮಾರ್ಕ್‌ನ ಕೋಪನ್ ಹೆಗನ್‌ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಕಡಲತೀರಗಳನ್ನು ಗುರುತಿಸಲು ‘ಬ್ಲೂ ಫ್ಲ್ಯಾಗ್’ ಮನ್ನಣೆಯನ್ನು ನೀಡುತ್ತದೆ. ಇದಕ್ಕಾಗಿ ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರಸ್ನೇಹಿ ನಿರ್ಮಾಣಗಳು ಸೇರಿದಂತೆ 33 ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ.
ಕೇಂದ್ರ ಸರ್ಕಾರವು ರಾಜ್ಯದ ಕಾಸರಕೋಡು, ಪಡುಬಿದ್ರಿ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ, ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಮತ್ತು ಅಂಡಮಾನ್ ದ್ವೀಪದ ರಾಧಾನಗರ ಕಡಲತೀರಗಳನ್ನು ‘ಬ್ಲೂ ಫ್ಲ್ಯಾಗ್’ ಮನ್ನಣೆಗೆ ಸೆ.18ರಂದು ಶಿಫಾರಸು ಮಾಡಿತ್ತು.
ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಮಾತ್ರ ಈವರೆಗೆ ಪ್ರತಿಷ್ಠಿತ ಪ್ರಮಾಣ ಪತ್ರ ಪಡೆದಿದ್ದವು. ಈಗ ಭಾರತವೂ ಆ ಸಾಲಿಗೆ ಸೇರ್ಪಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.