ಕಾರವಾರ: ಸತತ ಆರು ತಿಂಗಳಿಂದ ಪಡಿತರ ಪಡೆದುಕೊಳ್ಳದ ಅಂತ್ಯೋದಯ ಅನ್ನ ಯೋಜನೆ, ಬಿ.ಪಿ.ಎಲ್ ಪಡಿತರ ಕಾರ್ಡುಗಳನ್ನು ಅಮಾನತುಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಂಥ 3,310 ಕಾರ್ಡುಗಳನ್ನು ಈಗಾಗಲೆ ಅಮಾನತುಗೊಳಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕ್ರಮ ಕೈಗೊಂಡಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್.ಐ.ಸಿ) ಮಾಹಿತಿ ಆಧರಿಸಿ 2023ರ ನವೆಂಬರ್ ತಿಂಗಳಿನಿಂದ 2024ರ ಏಪ್ರಿಲ್ ತಿಂಗಳವರೆಗೆ ಪಡಿತರ ಪಡೆದುಕೊಳ್ಳದ ಆದ್ಯತಾ ಪಡಿತರ ಚೀಟಿಗಳ ಮೇಲೆ ಕ್ರಮವಹಿಸಲು ಇಲಾಖೆಯು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹಲವು ಪಡಿತರ ಚೀಟಿಯು ಅಮಾನತ್ತುಗೊಂಡಿದೆ. ಅವುಗಳನ್ನು ಪಡಿತರ ಖರೀದಿ ಹೊರತಾಗಿಯೂ ಉಳಿದ ಸೌಲಭ್ಯಕ್ಕೆ ಬಳಸಿಕೊಳ್ಳಲಾಗದಂತ ಸ್ಥಿತಿ ಕಾರ್ಡ್‍ದಾರರಿಗೆ ಎದುರಾಗಿದೆ.
ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆಯ 67 ಮತ್ತು 3,243 ಬಿ.ಪಿ.ಎಲ್ ಕಾರ್ಡ್‍ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ಅಮಾನತುಗೊಳಿಸಿದ್ದಾರೆ. ಒಂದು ತಿಂಗಳ ಹಿಂದಷ್ಟೆ ಈ ಕ್ರಮ ಪೂರ್ಣಗೊಂಡಿದೆ.
‘ಕಡು ಬಡವರಿಗೆ ಸರ್ಕಾರ ಉಚಿತ ಪಡಿತರ ಒದಗಿಸಲು ಪಡಿತರ ಚೀಟಿಗಳನ್ನು ನೀಡಿದೆ. ಕೆಲವರು ಪಡಿತರಕ್ಕಿಂತ ಆರೋಗ್ಯ ಸೌಲಭ್ಯ, ಸರ್ಕಾರದಿಂದ ಆದ್ಯತಾ ಪಡಿತರ ಚೀಟಿದಾರರಿಗೆ ಸಿಗಬಹುದಾದ ಇನ್ನಿತರ ಸೌಲಭ್ಯ ಪಡೆದುಕೊಳ್ಳಲು ಸುಳ್ಳು ದಾಖಲೆ ನೀಡಿ ಕಾರ್ಡ್ ಪಡೆದುಕೊಂಡಿದ್ದರು. ಪಡಿತರ ಪಡೆಯದೆ ಕೇವಲ ಇತರ ಸೌಲಭ್ಯ ಪಡೆದುಕೊಳ್ಳುವ ಕಾರ್ಡ್‍ಗಳಿಗೆ ಅಂಕುಶ ಹಾಕಲು ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದ ಕುರಿತು ತಂತ್ರಾಂಶದಲ್ಲಿ ದಾಖಲಾದ ಮಾಹಿತಿ ಆಧರಿಸಿ ಇಲಾಖೆ ಸೂಚಿಸಿದ ಪಡಿತರ ಕಾರ್ಡ್‍ಗಳನ್ನು ಅಮಾನತುಪಡಿಸಲಾಗಿದೆ. ಅವುಗಳನ್ನು ಕಾರ್ಡ್‍ದಾರರು ಬಳಕೆ ಮಾಡುವಂತಿಲ್ಲ. ಅಮಾನತುಗೊಂಡಿರುವ ಕಾರ್ಡ್‍ಗಳ ಬಗ್ಗೆ ಆಯಾ ತಹಶೀಲ್ದಾರ್ ಖುದ್ದಾಗಿ ಪರಿಶೀಲಿಸಿ, ಕಾರ್ಡ್‍ದಾರರ ಮನೆಗೆ ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದರೆ ಮಾತ್ರ ಅವುಗಳನ್ನು ಹೊಸದಾಗಿ ಸಕ್ರೀಯಗೊಳಿಸಲಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.