ಯಲ್ಲಾಪುರ: ‘ನೋವಿನಲ್ಲಿದ್ದವರಿಗೆ ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಭರವಸೆಯ ಭಾವವನ್ನು ತುಂಬಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಕಳಚೆ ಭೂಕುಸಿತದಿಂದ ಸಂತ್ರಸ್ತರಾದವರಿಗೆ ₹ 11 ಲಕ್ಷಗಳಷ್ಟು ಮೊತ್ತವನ್ನು ಸಂಗ್ರಹಿಸಿ ನೀಡಿದೆ’ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಟ್ರಸ್ಟಿ ಸಿ.ಎ. ಜನಾರ್ದನ ಹೆಬ್ಬಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಶುಕ್ರವಾರ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.
‘ಸಮಾಜಕ್ಕೆ ಒಳಿತು ಮಾಡುವುದಕ್ಕಾಗಿ ನಾವು ಸಂಸ್ಥೆಯ ರೀತಿಯಲ್ಲಿ ಕೆಲಸ ಮಾಡಬೇಕು. ನಮ್ಮ ಉತ್ತಮ ನಡವಳಿಕೆಯಿಂದ ಜೀವನದಲ್ಲಿ ಎತ್ತರಕ್ಕೆ ಏರಬೇಕು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಮಾ ಗ್ಯಾಸ್ ಏಜೆನ್ಸಿಯ ಮಾಲೀಕ ಅಬ್ದುಲ್ ಖಾದರ್ ಶೇಖ್ ಮಾತನಾಡಿ, ‘ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ಸಂಸ್ಥೆಗಳು ಸಮಾಜಕ್ಕೆ ಸದಾ ಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ, ‘ಎಲ್ಲದಕ್ಕೂ ನಾವು ಸರ್ಕಾರವನ್ನು ಅವಲಂಬಿಸಬಾರದು. ಜವಾಬ್ದಾರಿಯುತ ನಾಗರಿಕರಾಗಿ ಸಮಾಜದ ಹಿತಕ್ಕೆ ಕೆಲಸ ಮಾಡುವುದು ಅಗತ್ಯ’ ಎಂದರು. ಪ್ರಾಂಶುಪಾಲ ಸವಿತಾ ನಾಯ್ಕ ಇದ್ದರು.
ಒಟ್ಟು 79 ವಿದ್ಯಾರ್ಥಿಗಳಿಗೆ ₹ 1.5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮಾತೃಭೂಮಿ ಸೇವಾ ಪ್ರತಿಷ್ಠಾನದ ಟ್ರಸ್ಟಿ ಕಮಲಾಕರ ಭಟ್ಟ ಸ್ವಾಗತಿಸಿದರು. ವೇದಾ ಭಟ್ ಪ್ರಾರ್ಥಿಸಿದರು. ಪ್ರೇಮಾನಂದ ನಾಯ್ಕ ವಂದಿಸಿದರು. ದಿನೇಶ ಗೌಡ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.