ಕಾರವಾರ: ‘ಕರೆಂಟ್ ಹೋದ್ರೆ ಸಾಕು, ಮೊಬೈಲ್ ಸಿಗ್ನಲ್ ಇರಲ್ಲ. ತುರ್ತಾಗಿ ಕರೆ ಮಾಡೋದಕ್ಕೂ ಸಾಧ್ಯವಾಗೋದಿಲ್ಲ. ಇನ್ನು, ಮೊಬೈಲ್ ಇಂಟರ್‌ನೆಟ್ ನಂಬ್ಕೊಂಡು ಕೆಲಸ ಮಾಡೋದು ಅಷ್ಟರಲ್ಲೇ ಇದೆ. ನಾವು ಬಿ.ಎಸ್.ಎನ್.ಎಲ್.ಗೆ ದೂರು ಕೊಡಬೇಕೋ ಅಥವಾ ಕರೆಂಟ್ ತೆಗೀಬೇಡಿ ಎಂದು ಹೆಸ್ಕಾಂಗೆ ಒತ್ತಾಯಿಸಬೇಕೋ ಗೊತ್ತಾಗ್ತಿಲ್ಲ..’
ಇದು ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಸಿಗ್ನಲ್ ಅನ್ನೇ ನೆಚ್ಚಿಕೊಂಡಿರುವ ಗ್ರಾಮಸ್ಥರ, ಬಳಕೆದಾರರ ಹಲವು ದಿನಗಳ ದೂರು. ಜಿಲ್ಲೆಯ ಅನೇಕ ಕುಗ್ರಾಮಗಳಿಗೂ ಮೊಬೈಲ್ ಸಿಗ್ನಲ್ ತಲುಪಿಸಿದ ಶ್ರೇಯ ಬಿ.ಎಸ್.ಎನ್.ಎಲ್.ಗೆ ಸಲ್ಲುತ್ತದೆ. ಆದರೆ, ಅದರ ನಿರ್ವಹಣೆಯಲ್ಲಿ ಹಿಂದೆ ಬಿದ್ದಿರುವುದು ಗ್ರಾಹಕರನ್ನು ನಿರಾಸೆಗೆ ದೂಡಿದೆ.
ಮೊಬೈಲ್ ಸಿಗ್ನಲ್ ಕೈಕೊಟ್ಟರೆ ವಿದ್ಯಾರ್ಥಿಗಳು ಆನ್‌ಲೈನ್ ತರಗತಿ ತಪ್ಪಿಸಿಕೊಳ್ಳಬೇಕಾಗುತ್ತದೆ. ಮನೆಯಿಂದಲೇ ಕೆಲಸ ಮಾಡುವವರ ಪಾಡೂ ಇದಕ್ಕಿಂತ ಭಿನ್ನವಾಗಿಲ್ಲ. ಗ್ರಾಮೀಣ ಭಾಗದ ಆರೋಗ್ಯ ಸೇವೆಗಳಿಗೆ, ಪಡಿತರ ವಿತರಣೆ ವ್ಯವಸ್ಥೆಗೆ, ಬ್ಯಾಂಕಿಂಗ್ ಸೇವೆಗಳಿಗೆ ಹೀಗೆ ಹಲವು ರಂಗಗಳಲ್ಲಿ ತೊಂದರೆಯಾಗುತ್ತಿದೆ.
ಶಿರಸಿ: ತಾಲ್ಲೂಕಿನ ವಿವಿಧೆಡೆ ಕರೆಂಟ್ ಇಲ್ಲದಿದ್ದರೆ ಕತ್ತಲೆಯಷ್ಟೇ ಅಲ್ಲ, ಹೊರ ಊರಿನ ಸಂಪರ್ಕವೂ ಕಡಿದು ಹೋಗುತ್ತದೆ. ತುರ್ತು ಸಂದರ್ಭದಲ್ಲಿ ಕರೆ ಮಾಡಲೂ ಸಾಧ್ಯವಾಗದೆ ಪರದಾಡಬೇಕಾಗುತ್ತದೆ. ನಗರಕ್ಕೆ ಹೊಂದಿಕೊಂಡಿರುವ ಕೆಲವು ಊರುಗಳನ್ನು ಬಿಟ್ಟರೆ ಮತ್ತಿಘಟ್ಟ, ದೇವನಳ್ಳಿ, ಬಂಡಲ, ಮಂಜುಗುಣಿ, ವಾನಳ್ಳಿ, ಜಡ್ಡಿಗದ್ದೆ, ಕಕ್ಕಳ್ಳಿ ಭಾಗದ ಜನರಿಗೆ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ವಿಪರೀತ ಕಾಡುತ್ತಿದೆ.
ನೂರಾರು ಮಂದಿ ‘ವರ್ಕ್ ಫ್ರಂ ಹೋಮ್’ನಲ್ಲಿದ್ದಾರೆ. ಹಳ್ಳಿಗಳಲ್ಲಿ ‘ಫೈಬರ್ ಟು ಹೋಮ್’ (ಎಫ್.ಟಿ.ಟಿ.ಎಚ್.) ಸೌಲಭ್ಯವಿದ್ದರೂ ಮಳೆ, ಗಾಳಿಗೆ ಅವು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ.
‘ಮೊಬೈಲ್ ನಂಬಿ ಗ್ರಾಮೀಣ ಭಾಗದಲ್ಲಿ ಮೊದಲಿದ್ದ ಸ್ಥಿರ ದೂರವಾಣಿ ಸೌಲಭ್ಯ ನಿಲ್ಲಿಸಲಾಗಿತ್ತು. ಈಗ ಕರೆ ಮಾಡಲು ಯಾವ ಸೌಲಭ್ಯವೂ ಇಲ್ಲ. ಬಿ.ಎಸ್.ಎನ್.ಎಲ್ ಟವರ್, ದೂರವಾಣಿ ವಿನಿಮಯ ಕೇಂದ್ರಗಳ ಸ್ಥಿತಿಯಂತೂ ಕೇಳುವಂತಿಲ್ಲ’ ಎನ್ನುತ್ತಾರೆ ದೇವನಳ್ಳಿಯ ರಾಮಚಂದ್ರ ಮರಾಠಿ.
ಗೋಕರ್ಣ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಮೊಬೈಲ್ ಟವರ್‌ಗಳಿವೆ. ಸಮರ್ಪಕ ನಿರ್ವಹಣೆಯಿಲ್ಲದೇ ಕೆಲವೊಮ್ಮೆ ವಾರಗಟ್ಟೆಲೇ ಸ್ತಬ್ಧವಾಗುತ್ತಿವೆ. ಕೆಲವು ಉಪಕರಣಗಳ ಬಿಡಿಭಾಗ ಹಾಳಾಗಿದ್ದು, ಅವುಗಳನ್ನು ಕಾರವಾರದಿಂದಲೇ ತರಬೇಕಾಗಿದೆ. ದುರಸ್ತಿಗೆ ಕುಮಟಾದಿಂದ ಸಿಬ್ಬಂದಿ ಬರಬೇಕು. ತಾಲ್ಲೂಕಿನಲ್ಲಿರುವ ಇಬ್ಬರು ಅಥವಾ ಮೂವರು ತಾಂತ್ರಿಕ ಸಿಬ್ಬಂದಿಯೇ ಎಲ್ಲಾ ದೂರವಾಣಿ ಕೇಂದ್ರಗಳನ್ನೂ ನಿರ್ವಹಿಸಬೇಕಿದೆ.
ಇಲ್ಲಿ 900ಕ್ಕೂ ಹೆಚ್ಚು ಸ್ಥಿರ ದೂರವಾಣಿಗಳಿವೆ. ಅವುಗಳನ್ನು ದುರಸ್ತಿ ಮಾಡುವ ಲೈನ್‌ಮ್ಯಾನ್‌ಗಳು ಕೆಲವು ವರ್ಷಗಳಿಂದ ಯಾರೂ ನಿಯುಕ್ತರಾಗಿಲ್ಲ. ಕಳೆದ ತಿಂಗಳಿನಿಂದ ಪದೇಪದೆ ಸಿಗ್ನಲ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಬೇಸತ್ತು ಹತ್ತಾರು ಗ್ರಾಹಕರು ಖಾಸಗಿ ನೆಟ್‌ವರ್ಕ್‌ಗಳಿಗೆ ಬದಲಾಯಿಸಿಕೊಂಡಿದ್ದಾರೆ.
ಈ ಬಗ್ಗೆ ಎಸ್.ಡಿ.ಇ ಪ್ರಿಯಾಂಕಾ, ‘ಎರಡು ತಿಂಗಳಿನಿಂದ ಇಲ್ಲಿಯ ಪರಿಸ್ಥಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಾನೊಬ್ಬಳೇ ಅಸಾಹಾಯಕಳಾಗಿದ್ದೇನೆ’ ಎಂದು ಹೇಳುತ್ತಾರೆ.
ಅಂಕೋಲಾ: ತಾಲ್ಲೂಕಿನ ಅರ್ಧದಷ್ಟು ಹಳ್ಳಿಗಳು ಗುಡ್ಡಗಾಡು ಪ್ರದೇಶಗಳಿಗೆ ಹೊಂದಿಕೊಂಡಿವೆ. ಅವುಗಳಲ್ಲಿ ಕೆಲವು ಗ್ರಾಮಗಳಿಗೆ ಯಾವುದೇ ಮೊಬೈಲ್ ನೆಟ್‌ವರ್ಕ್ ಸಂಪರ್ಕವಿಲ್ಲ. ಇನ್ನುಳಿದವುಗಳಿಗೆ ಬಿ.ಎಸ್.ಎನ್.ಎಲ್ ಆಸರೆಯಾಗಿದೆ.
ಅಗಸೂರು, ಹಿಲ್ಲೂರು, ಡೊಂಗ್ರಿ, ಸುಂಕಸಾಳ ಆಚವೆ ಮತ್ತು ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳು ಇಂದಿಗೂ ನೆಟ್‌ವರ್ಕ್ ಸಂಪರ್ಕ ಹೊಂದಿಲ್ಲ. ಕಾಲ್ನಡಿಗೆಯಲ್ಲಿ 3–4 ಕಿಲೋಮೀಟರ್ ಕ್ರಮಿಸಿ ದೊಡ್ಡ ಮರ ಅಥವಾ ಬೆಟ್ಟದ ಮೇಲೆ ಹತ್ತಿದರೆ ಮಾತ್ರ ಸಂಪರ್ಕ ಸಾಧ್ಯವಾಗುತ್ತದೆ.
ಮಳೆಗಾಲದಲ್ಲಿ ಒಮ್ಮೆ ವಿದ್ಯುತ್ ಕಡಿತವಾದರೆ ವಾರವಾದರೂ ಸಂಪರ್ಕ ಸಾಧ್ಯವಾಗುವುದಿಲ್ಲ. ಪ್ರವಾಹದ ಸಂದರ್ಭದಲ್ಲಿ ಜಾನುವಾರು ಸಾವನ್ನಪ್ಪಿದರೆ, ನೆಟ್‌ವರ್ಕ್ ಸಿಗದೇ ವೈದ್ಯರಿಗೆ ವಿಷಯ ತಲುಪಿಸಲಾಗದೇ ಅವುಗಳನ್ನು ಮಣ್ಣು ಮಾಡಿದಾಗ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಪರಿಹಾರ ಮಾರ್ಗೋಪಾಯದ ಕುರಿತು ತಿಳಿಸಿ ಎಂದು ಇತ್ತೀಚಿಗೆ ವೈದ್ಯರೊಬ್ಬರು ಉಪವಿಭಾಗಾಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಪರ್ಯಾಯ ಪರಿಹಾರ ದೊರೆಯಲಿಲ್ಲ.
ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾಲೇಜು ಆರಂಭವಾದ ನಂತರ ವಸತಿ ನಿಲಯದಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಾರೆ. ಆನ್‌ಲೈನ್ ತರಗತಿಗಳಿಗೆ ನೆಟ್‌ವರ್ಕ್ ಸಮಸ್ಯೆಯಿಂದ ಅವರು ಗೈರು ಹಾಜರಾಗುವುದು ಬೇಸರವಾಗುತ್ತದೆ ಎನ್ನುತ್ತಾರೆ ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರು.
ಸಿದ್ದಾಪುರ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್‌ಗಾಗಿ ಪರದಾಡಬೇಕಿದೆ. ಮೊಬೈಲ್ ಹಿಡಿದು ನೆಟ್‌ವರ್ಕ್‌ಗಾಗಿ ಓಡಾಡುವವರನ್ನು ಬಹಳಷ್ಟು ಹಳ್ಳಿಗಳಲ್ಲಿ ಕಾಣಬಹುದು. ಟವರ್‌ಗಳಿದ್ದರೂ ನೆಟ್‌ವರ್ಕ್ ಎಲ್ಲರನ್ನೂ ತಲುಪುತ್ತಿಲ್ಲ.
‘ನಮ್ಮ ಕಾಲೇಜಿಗೆ ಹಳ್ಳಿಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಬರುತ್ತಾರೆ. ಶೇ 40ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿದೆ. ಹಲವರು ಗುಡ್ಡ ಹತ್ತಿ, ಎಲ್ಲೆಲ್ಲೋ ಹೋಗಿ ಸಿಗ್ನಲ್ ಕಂಡುಕೊಳ್ಳುತ್ತಾರೆ. ವಿದ್ಯುತ್ ಕೈಕೊಟ್ಟರೆ ನೆಟ್‌ವರ್ಕ್ ಕೂಡ ಮಾಯವಾಗುತ್ತದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜೆ.ಎಸ್.ಹೆಗಡೆ ವಿಷಾದಿಸುತ್ತಾರೆ.
ಹೊನ್ನಾವರ: ತಾಲ್ಲೂಕಿನಲ್ಲಿ ಕೆಲವೇ ವರ್ಷಗಳ ಹಿಂದೆ ಸದ್ದು ಮಾಡಿದ ಸ್ಥಿರ ದೂರವಾಣಿ ಈಗ ಸ್ತಬ್ಧವಾಗಿದೆ. ಜೊತೆಗಿದ್ದ ಇಂಟರ್‌ನೆಟ್ ಕೂಡ ಇಲ್ಲವಾಗಿದೆ. ವರ್ಷಗಳಿಂದ ಸಂಬಳ ವಂಚಿತರಾಗಿರುವ ಸೆಕ್ಯುರಿಟಿ ಗಾರ್ಡ್, ಬಿಎಸ್ಎನ್ಎಲ್ ಕಚೇರಿ ಕಾಯುತ್ತಿದ್ದಾರೆ.
ಬಿ.ಎಸ್.ಎನ್.ಎಲ್ ಮೊಬೈಲ್ ಟವರ್‌ಗೆ ಬ್ಯಾಟರಿ ಬ್ಯಾಕಪ್ ಇಲ್ಲದಿರುವುದರಿಂದ ಕರೆಂಟ್ ಇದ್ದಾಗ ಮಾತ್ರ ನಿಧಾನ ಕೆಲಸ ಮಾಡುತ್ತದೆ. ಕೆಲವು ಖಾಸಗಿ ಕಂಪನಿಗಳು ಅಲ್ಲಲ್ಲಿ ಟವರ್ ನಿರ್ಮಿಸಿದ್ದು ಇಂಟರ್‌ನೆಟ್ ಸಂಪರ್ಕ ಕಲ್ಪಿಸಿವೆ. ಆದರೆ, ಸಂಪರ್ಕಗಳ ಸಂಖ್ಯೆ ಹೆಚ್ಚಿದಂತೆ ವೇಗ ಕಡಿಮೆಯಾಗುತ್ತಿರುವ ದೂರುಗಳು ಕೇಳಿ ಬರುತ್ತಿವೆ.
ಬಿ.ಎಸ್.ಎನ್.ಎಲ್.ನ ಫೈಬರ್‌ನೆಟ್ ಮೂಲಕವೂ ಕೆಲವೆಡೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಇವು ಯಾವುವೂ ನಿರಂತರ ಹಾಗೂ ನಿರಾತಂಕ ಸಂಪರ್ಕ ಒದಗಿಸುತ್ತಿಲ್ಲ.
ಲಸಿಕಾ ಅಭಿಯಾನಕ್ಕೆ ಹಿನ್ನಡೆ
ಯಲ್ಲಾಪುರ: ಪಟ್ಟಣದಿಂದ 40 ಕಿಲೋಮಿಟರ್ ದೂರದಲ್ಲಿರುವ ಮಲವಳ್ಳಿ ಗ್ರಾಮದಲ್ಲಿ (ಮಾವಿನಮನೆ ಪಂಚಾಯಿತಿ) ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇಲ್ಲಿ ಸಿಗ್ನಲ್ ಸಮಸ್ಯೆಯಿಂದ ಕೋವಿಡ್ ಲಸಿಕಾ ಅಭಿಯಾನಕ್ಕೆ ತೊಡಕಾಗಿದೆ.
ಲಸಿಕೆ ಪಡೆಯಲು ಬಂದ 10 ಜನರ ಮಾಹಿತಿ, ಆಧಾರ್ ಕಾರ್ಡ್ ಪಡೆದು ಬಾರೆ ಸಮೀಪದ ಗೋಪನಪಾಲ್ ಎಂಬಲ್ಲಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹೋಗತ್ತಾರೆ. ಅಲ್ಲಿ ನೋಂದಣಿ ಮಾಡಿ, ಅವರ ಪಟ್ಟಿಯನ್ನು ಮರಳಿ ಆರೋಗ್ಯ ಕೇಂದ್ರಕ್ಕೆ ತರುತ್ತಾರೆ. ನಂತರ ಲಸಿಕೆ ನೀಡಲಾಗುತ್ತದೆ. ಇದಕ್ಕೆ ಸುಮಾರು 45 ನಿಮಿಷ ಬೇಕಾಗುತ್ತದೆ. ನಂತರವೇ ಉಳಿದವರಿಗೆ ಅವಕಾಶ ಸಿಗುತ್ತದೆ.
ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 3,500 ಜನರಿದ್ದಾರೆ. ಇಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ವಿದ್ಯುತ್ ಇದ್ದರೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಸ್ಥಿರ ದೂರವಾಣಿ ಕೂಡ ಸ್ಥಗಿತಗೊಂಡಿದೆ.
ಸಿಗ್ನಲ್ ಹುಡುಕಿ ಅಲೆದಾಟ
ಜೊಯಿಡಾ: ಅಣಶಿಯಲ್ಲಿ ಬಿ.ಎಸ್.ಎನ್.ಎಲ್ ಮಾತ್ರ ಮೊಬೈಲ್ ಸಿಗ್ನಲ್ ನೀಡುತ್ತಿದೆ. ದಟ್ಟಾರಣ್ಯದಿಂದ ಕೂಡಿದ ಸುಮಾರು 15 ಹಳ್ಳಿಗಳ ಜನ ಇದನ್ನೇ ನಂಬಿಕೊಂಡಿದ್ದಾರೆ. ಆದರೆ, ವಿದ್ಯುತ್ ಹೋದರೆ ನೆಟ್‌ವರ್ಕ್ ಹೋಗುತ್ತದೆ.
ಅಣಶಿ, ಕಾಜುವಾಡ, ಮಾಟಗಾಂವ ಹೊರತುಪಡಿಸಿ ಉಳಿದ ಹಳ್ಳಿಗಳಲ್ಲಿ ಸರಿಯಾಗಿ ಸಿಗ್ನಲ್ ಬರುವುದಿಲ್ಲ. ಬೆಟ್ಟ, ಗುಡ್ಡಗಳ ಮೇಲೆ ಅಥವಾ ಕೆಲವು ಕಡೆ ಊರ ಹೊರಗೆ ಸಂಪರ್ಕ ಸಾಧ್ಯವಾಗುವ ನಿರ್ದಿಷ್ಟ ಸ್ಥಳಕ್ಕೆ ಹೋಗುತ್ತಾರೆ. ಒಮ್ಮೊಮ್ಮೆ ಮನೆಯಿಂದ ಹೊರಡುವಾಗ ಇದ್ದ ವಿದ್ಯುತ್, ಅಲ್ಲಿಗೆ ತಲುಪುವಾಗ ಹೋಗಿರುತ್ತದೆ. ಆಗ ಯಥಾಪ್ರಕಾರ ಮೊಬೈಲ್ ನೆಟ್‌ವರ್ಕ್ ಕೂಡ ಹೋಗಿರುತ್ತದೆ.
ಎರಡು ವರ್ಷಗಳ ಹಿಂದೆ ಅಣಶಿಯಲ್ಲಿ ಖಾಸಗಿ ಸಂಸ್ಥೆಯೊಂದು ಟವರ್ ಅಳವಡಿಸಿದೆ. ಆದರೆ, ಅದಕ್ಕೆ ಕುಂಬಾರವಾಡ ಅಥವಾ ಕದ್ರಾದಿಂದ ಕೇಬಲ್ ಅಳವಡಿಸಲು ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಹಾಗಾಗಿ ಅದು ಕಾರ್ಯಾರಂಭ ಮಾಡಿಲ್ಲ.
‘ಟವರ್‌ನ ಬ್ಯಾಟರಿಗಳನ್ನು ದುರಸ್ತಿ ಮಾಡಲಾಗಿದೆ. ಆದರೆ, ವಿದ್ಯುತ್ ವ್ಯತ್ಯಯವಾಗಿ ಬ್ಯಾಟರಿಗಳು ಚಾರ್ಜ್ ಆಗುತ್ತಿಲ್ಲ. ವಿದ್ಯುತ್ ಹೋದ ಮರುಕ್ಷಣವೇ ಸ್ವಯಂಚಾಲಿತವಾಗಿ ನೆಟ್‌ವರ್ಕ್ ಬರುವಂತೆ ಹೊಸ ತಂತ್ರಜ್ಞಾನ ಅಳವಡಿಸಲಾಗುವುದು’ ಎಂದು ಪ್ರಭಾರ ಜೆ.ಟಿ.ಒ ಆರ್.ಆರ್.ಮಡಗಾವಿ ತಿಳಿಸಿದ್ದಾರೆ.
‘ಕೆಲವೆಡೆ ಹೊಸ ಜನರೇಟರ್’: ‘ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ಬ್ಯಾಟರಿಗಳನ್ನು ಬದಲಿಸಲಾಗುತ್ತಿದೆ. ಕೆಲವು ಕಡೆ ಹೊಸ ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಹಳೆಯವುಗಳನ್ನು ಬೇರೆ ಕಡೆ ಬಳಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದು ಬಿ.ಎಸ್.ಎನ್.ಎಲ್ ಉಪ ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕೆಲವೆಡೆ ಬ್ಯಾಟರಿಗಳ ಸಮಸ್ಯೆಯಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆಗಳನ್ನೂ ಸರಿಪಡಿಸಲಾಗುತ್ತಿದೆ. ಗೋಕರ್ಣದ ಅಶೋಕೆಯಲ್ಲಿ ಬೇರೆ ಮಾಡ್ಯೂಲ್ ಅಳವಡಿಸಿ ದುರಸ್ತಿ ಮಾಡಲಾಗಿದೆ. ಶಿರಸಿ ಸುತ್ತಮುತ್ತ ವಿದ್ಯುತ್ ಇಲ್ಲದಿದ್ದಾಗ ತೊಂದರೆಯಾಗುತ್ತಿದೆ. ಲಭ್ಯ ಸಂಪನ್ಮೂಲದಲ್ಲೇ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಯಾರು ಏನು ಹೇಳುತ್ತಾರೆ?:
*
ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗೆ ಅನುಕೂಲವಾಗುವಂತೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಬಲಪಡಿಸಲು ಅಗತ್ಯ ಕ್ರಮವಾಗಬೇಕು.
– ಪ್ರವೀಣ ಹೆಗಡೆ, ಜಡ್ಡಿಗದ್ದೆ ಗ್ರಾಮಸ್ಥ
*
ಹಲವು ಬಾರಿ ಇಲ್ಲಿಯ ಅವ್ಯವಸ್ಥೆಯನ್ನು ಪೋನ್ ಮುಖಾಂತರ ಮೇಲಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಗಣಪತಿ ನಾಯ್ಕ, ಗೋಕರ್ಣ ಗ್ರಾಮ ಪಂಚಾಯ್ತಿ ಸದಸ್ಯ
*
ಒಮ್ಮೊಮ್ಮೆ ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು ಕಷ್ಟವಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕುಳಿತು ತರಗತಿ ಕೇಳಬೇಕಾಗುತ್ತದೆ. ಮಳೆ ಬಂದರೆ ಇನ್ನೂ ತೊಂದರೆಯಾಗುತ್ತದೆ.
– ಶ್ರೀದೇವಿ ಗೌಡ, ವಿದ್ಯಾರ್ಥಿನಿ, ಅಚವೆ
*
ನನ್ನ ಮನೆ ಸಿದ್ದಾಪುರ ಪಟ್ಟಣದಿಂದ 18 ಕಿ.ಮೀ ದೂರ ಇದೆ. ಮನೆಯಲ್ಲಿ ಸಿಗುವ ನೆಟ್‌ವರ್ಕ್‌ನಲ್ಲಿ ಮಾತನಾಡಬಹುದು. ಆದರೆ, ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ.
– ನಾಗರಾಜ ಗೌಡ ಹಲಸಿನಮನೆ, ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿ
*
ಮಲವಳ್ಳಿಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಲಸಿಕೆ ಅಭಿಯಾನಕ್ಕೆ ತೊಡಕಾಗುತ್ತಿದೆ. ಒ.ಎಫ್.ಸಿ ಮೂಲಕ ದೂರವಾಣಿ ವೈಫೈ ಸಂಪರ್ಕ ಪಡೆಯಲು ನಿರ್ಧರಿಸಲಾಗಿದೆ.
– ಡಾ. ನರೇಂದ್ರ ಪವಾರ್, ಯಲ್ಲಾಪುರ ಟಿ.ಎಚ್.ಒ
*
ನಾನು ಆನ್‌ಲೈನ್ ಪಾಠಕ್ಕೆ ನಿತ್ಯ ಎರಡು ಮೈಲಿ ನಡೆದುಕೊಂಡು ಮಂಕಿಗೆ ಹೋಗುತ್ತೇನೆ. ಆದರೆ, ಅಲ್ಲೂ ಇಂಟರ್‌ನೆಟ್ ಸರಿಯಾಗಿರದೆ ಹಲವು ಬಾರಿ ಪಾಠದಿಂದ ವಂಚಿತನಾಗಿದ್ದೇನೆ.
– ಮಧುರೇಶ ಗೌಡ, ಪದವಿ ವಿದ್ಯಾರ್ಥಿ, ಹೊನ್ನಾವರ.
–
ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ರವಿ ಸೂರಿ, ಮಾರುತಿ ಹರಿಕಂತ್ರ, ರವೀಂದ್ರ ಭಟ್ ಬಳಗುಳಿ, ನಾಗರಾಜ ಮದ್ಗುಣಿ, ಜ್ಞಾನೇಶ್ವರ ದೇಸಾಯಿ, ಎಂ.ಜಿ.ಹೆಗಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.