ADVERTISEMENT

ಅಂಕೋಲಾ: ಅವ್ಯವಸ್ಥೆಯ ಆಗರವಾದ ಕೋಟೆವಾಡಾ ರುದ್ರಭೂಮಿ

ಚಾವಣಿ ಇಲ್ಲದ ಪರಿಣಾಮ ಮಳೆಗಾಲದಲ್ಲಿ ಅಂತ್ಯ ಸಂಸ್ಕಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:22 IST
Last Updated 9 ಜುಲೈ 2024, 15:22 IST
ಅಂಕೋಲಾ ಪಟ್ಟಣದ ಕೋಟೆವಾಡಾದ ರುದ್ರಭೂಮಿ
ಅಂಕೋಲಾ ಪಟ್ಟಣದ ಕೋಟೆವಾಡಾದ ರುದ್ರಭೂಮಿ   

ಅಂಕೋಲಾ: ಪಟ್ಟಣದ ಕೋಟೆವಾಡದಲ್ಲಿರುವ ಹಿಂದೂ ರುದ್ರ ಭೂಮಿ ನಿರ್ವಹಣೆಯ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದ್ದು ಮಳೆಗಾಲದಲ್ಲಿ ಚಿತೆ ದಹಿಸುವುದೇ ದೊಡ್ಡ ಚಿಂತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಟ್ಟಣದ ಸುತ್ತ ಮುತ್ತಲಿನ ವ್ಯಾಪ್ತಿಯ ಬಹುತೇಕ ಸಮಾಜದ ಜನರು ಶವ ಸಂಸ್ಕಾರಕ್ಕೆ ಬಳಕೆ ಮಾಡುವ ಈ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸುವ ಸ್ಥಳದಲ್ಲಿ ಶೆಡ್‍ನ ಚಾವಣಿ ಮಳೆ–ಗಾಳಿಗೆ ಹಾರಿ ಹೋಗಿದ್ದು, ಮಳೆಯ ನೀರು ಶವ ದಹಿಸುವ ತೊಟ್ಟಿಯಲ್ಲೇ ನೇರವಾಗಿ ಸುರಿಯುತ್ತಿದೆ. ಇದರಿಂದ ಅಂತಿಮ ಸಂಸ್ಕಾರ ಕಾರ್ಯಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂಬುದು ಜನರ ದೂರು.

‘ಮಳೆ ನೀರು ಸುರಿದು ಶವ ಸಂಸ್ಕಾರ ಬೂದಿಯೊಂದಿಗೆ ಬೆರೆತು ಸ್ಮಶಾನ ಭೂಮಿಯ ಪರಿಸರ ಗಬ್ಬೆದ್ದು ನಾರುವಂತಾಗಿದೆ. ಬೀಡಾಡಿ ದನಗಳು, ಹಂದಿಗಳು ಶವ ಸಂಸ್ಕಾರದ ಸ್ಥಳದಲ್ಲಿ ಆಶ್ರಯ ಪಡೆದಿವೆ. ವರ್ಷಕ್ಕಿಂತ ಹಿಂದಿನಿಂದಲೂ ಈ ದುಸ್ಥಿತಿ ಎದುರಾಗಿದ್ದರೂ ಸಮಸ್ಯೆ ಪರಿಹರಿಸುವತ್ತ ಯಾರೂ ಗಮನ ಹರಿಸಿದಂತಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಾಗರಾಜ ಅಂಕೋಲಾ.

ADVERTISEMENT

‘ಒಂದು ದಹನ ತೊಟ್ಟಿ ಸುಸ್ಥಿಯಲ್ಲಿದ್ದರೆ ಮಳೆ ನೀರು ಸುರಿಯುವ ಭಾಗದಲ್ಲಿ ಇರುವ ತೊಟ್ಟಿ ತುಕ್ಕು ಹಿಡಿದು ಕಳಚಿ ಬೀಳುವ ಸ್ಥಿತಿಗೆ ತಲುಪಿದೆ. ಒಂದು ಬದಿಯ ತೊಟ್ಟಿಯಲ್ಲಿ ಸಂಸ್ಕಾರ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದು ಮೃತ ದೇಹ ತಂದರೆ ಮುರುಕು ತೊಟ್ಟಿಯಲ್ಲಿ ಸಂಸ್ಕಾರ ಕಾರ್ಯ ಅನಿವಾರ್ಯವಾಗಿದೆ’ ಎಂದರು.

‘ರುದ್ರಭೂಮಿಯ ಚಾವಣಿಗೆ ಹಾನಿಯಾಗಿರುವ ಬಗ್ಗೆ ಸಾರ್ವಜನಿಕರ ದೂರು ಬಂದಿದೆ. ಆದಷ್ಟು ಶೀಘ್ರದಲ್ಲಿ ರುದ್ರಭೂಮಿಗೆ ಅಗತ್ಯ ಸೌಕರ್ಯ ಒದಗಿಸಿಕೊಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.