ಕಾರವಾರ: ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿಯ ಮಹಿಮೆ ಎಂಬ ಕುಗ್ರಾಮಕ್ಕೆ ಬಸ್ ಸಂಚಾರ ಇಲ್ಲದಿರುವ ವಿಚಾರವು ಸೋಮವಾರ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿತು. ಸಂಜೆಯ ವೇಳೆಗೆ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಯಿತು.
ಇದನ್ನೂ ಓದಿ:ಕಾರವಾರ: ಹೆಸರಿನಲ್ಲೇ ಉಳಿದ ಗ್ರಾಮದ ‘ಮಹಿಮೆ’!
ಕಲಾಪದ ಶೂನ್ಯ ವೇಳೆಯಲ್ಲಿ ಮಾತನಾಡಿದದ ಸದಸ್ಯ ಪಿ.ಎಂ.ಮುನಿರಾಜು ಗೌಡ, ‘ಪ್ರಜಾವಾಣಿ’ಯ ಮಾರ್ಚ್ 13ರ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಪ್ರಸ್ತಾಪಿಸಿದರು. ‘ಬಸ್ಸಿಗಾಗಿ 8 ಕಿ.ಮೀ ನಡೆವ ವಿದ್ಯಾರ್ಥಿಗಳು!’ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು.
‘ಬಸ್ ಸೌಕರ್ಯವಿಲ್ಲದ ಕಾರಣ ಸುಮಾರು 40 ಮಕ್ಕಳು ಶಾಲೆಗೆ ಹೋಗಲು ದಟ್ಟ ಕಾಡಿನ ನಡುವೆ ನಡೆದುಕೊಂಡು ಹೋಗುವುದು ಸಾಹಸವೇ ಸರಿ. ಇದರಿಂದ ಮಕ್ಕಳ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕಾಡು ದಾರಿಯಲ್ಲಿ ಸಂಜೆ ಮನೆಗೆ ಬರುವಾಗ ಏನಾದರೂ ಅನಾಹುತ ಆಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು ಬಸ್ ಸೌಲಭ್ಯ ಒದಗಿಸಬೇಕು’ ಎಂದು ಮುನಿರಾಜು ಗೌಡ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವ ಸುರೇಶಕುಮಾರ್, ‘ಕಳೆದ ವರ್ಷ ಆ ಹಳ್ಳಿಗೆ ನಾನೂ ಭೇಟಿ ನೀಡಿದ್ದೆ. ಅಲ್ಲಿನ ಪರಿಸ್ಥಿತಿಯನ್ನು ಅರಿತಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚಿಸಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಮಟಾ ಘಟಕದ ವ್ಯವಸ್ಥಾಪಕಿ ದೀಪಾ ನಾಯಕ, ‘ಮಹಿಮೆ ಗ್ರಾಮದ ರಸ್ತೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ಸೋಮವಾರ ಎರಡು ಬಾರಿ ಬಸ್ ಸಂಚಾರ ಮಾಡಲಾಗಿದೆ. ಮಾರ್ಚ್ 16ರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ ವೇಳಾಪಟ್ಟಿ ಸಿದ್ಧಪಡಿಸಿ ಬಸ್ ಸಂಚಾರ ಆರಂಭಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.