ADVERTISEMENT

ಸ್ಮಶಾನ ಶುಚಿಗೊಳಿಸುವ ಉದ್ಯಮಿಗಳು: ಸತತ 160ನೇ ವಾರ ಶ್ರಮದಾನ

ಸುಭಾಶ್ಚಂದ್ರ ಬೋಸ್ ಕಾರ್ಯಪಡೆಯಿಂದ ಸತತ 160ನೇ ವಾರ ಶ್ರಮದಾನ

ಗಣಪತಿ ಹೆಗಡೆ
Published 30 ಅಕ್ಟೋಬರ್ 2022, 19:30 IST
Last Updated 30 ಅಕ್ಟೋಬರ್ 2022, 19:30 IST
ಸುಭಾಶ್ಚಂದ್ರ ಬೋಸ್ ಕಾರ್ಯಪಡೆ ಸದಸ್ಯರು ಶಿರಸಿಯ ವಿದ್ಯಾನಗರ ರುದ್ರಭೂಮಿಗೆ (ನೆಮ್ಮದಿ) ಶವ ಸಂಸ್ಕಾರಕ್ಕೆ ಅಗತ್ಯವಿರುವ ಕಟ್ಟಿಗೆ ತಂದು ದಾಸ್ತಾನು ಮಾಡುತ್ತಿರುವುದು.
ಸುಭಾಶ್ಚಂದ್ರ ಬೋಸ್ ಕಾರ್ಯಪಡೆ ಸದಸ್ಯರು ಶಿರಸಿಯ ವಿದ್ಯಾನಗರ ರುದ್ರಭೂಮಿಗೆ (ನೆಮ್ಮದಿ) ಶವ ಸಂಸ್ಕಾರಕ್ಕೆ ಅಗತ್ಯವಿರುವ ಕಟ್ಟಿಗೆ ತಂದು ದಾಸ್ತಾನು ಮಾಡುತ್ತಿರುವುದು.   

ಶಿರಸಿ: ಇಲ್ಲಿನ ವಿದ್ಯಾ ನಗರದ ರುದ್ರಭೂಮಿಯನ್ನು (ನೆಮ್ಮದಿ) ಪ್ರತಿ ಭಾನುವಾರ ನಗರದ ಹಲವು ಉದ್ಯಮಿಗಳು ಸೇರಿ ಸ್ವಚ್ಛಗೊಳಿಸುತ್ತಾರೆ! ಸತತ 160 ವಾರಗಳಿಂದ ಅವರು ಶ್ರಮದಾನ ಮಾಡುತ್ತಿದ್ದಾರೆ.

ಸುಮಾರು ಹದಿನೆಂಟು ಜನರ ಸಮಾನ ಮನಸ್ಕರು ‘ಸುಭಾಶ್ಚಂದ್ರ ಬೋಸ್ ಕಾರ್ಯಪಡೆ’ ಹೆಸರಿನ ತಂಡ ರಚಿಸಿಕೊಂಡಿದ್ದಾರೆ. ತಂಡದ ಸದಸ್ಯರೆಲ್ಲರೂ ವಿವಿಧ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ವಾರದ ಆರು ದಿನ ಬಿಡುವಿಲ್ಲದೆ ದುಡಿಯುವ ಇವರು ಭಾನುವಾರದ ರಜಾದಿನದಲ್ಲೂ ಎರಡು ತಾಸು ರುದ್ರಭೂಮಿ ಸ್ವಚ್ಛತೆಗೆ ಮೀಸಲಿಡುತ್ತಿದ್ದಾರೆ.

ರುದ್ರಭೂಮಿ ಶುಚಿಗೊಳಿಸುವುದು, ಗಿಡಗಂಟಿ ತೆರವುಗೊಳಿಸುವುದು, ಸ್ಮಶಾನಕ್ಕೆ ಅಗತ್ಯ ಕಟ್ಟಿಗೆಗಳನ್ನು ಹೊತ್ತು ತರುವುದು ಸೇರಿದಂತೆ ವಿವಿಧ ಬಗೆಯ ಕೆಲಸ ಮಾಡಲಾಗುತ್ತಿದೆ. 2018ರ ಅಕ್ಟೋಬರ್ 2 ರಂದು ತಂಡ ರಚನೆಯಾಗಿತ್ತು.

ADVERTISEMENT

ಪ್ರತಿ ಭಾನುವಾರ ನಸುಕಿನ ಜಾವ ರುದ್ರಭೂಮಿಯಲ್ಲಿ ಸೇರುವ ತಂಡದ ಸದಸ್ಯರು ಕೆಲಸ ನಿಗದಿಪಡಿಸಿಕೊಳ್ಳುತ್ತಾರೆ. ವಿದ್ಯಾ ನಗರ ರುದ್ರಭೂಮಿ ಸಮಿತಿಯ ಪ್ರಮುಖ ವಿ.ಪಿ.ಹೆಗಡೆ ವೈಶಾಲಿ ಮಾರ್ಗದರ್ಶನ ಮಾಡುತ್ತಾರೆ. ಕೆಲಸ ಮುಗಿದ ಬಳಿಕ ತಂಡದ ಸದಸ್ಯರ ಪೈಕಿ ಯಾರಾದರೂ ಉಪಹಾರ ವ್ಯವಸ್ಥೆ ಕಲ್ಪಿಸುತ್ತಾರೆ.

‘ಜನ್ಮದಿನವನ್ನು ಸ್ಮಶಾನ ತೊಳೆಯುವ ಮೂಲಕ ಆಚರಿಸಿಕೊಂಡಿದ್ದೆ. ಇದು ಸ್ನೇಹಿತ ವಲಯದಲ್ಲಿ ಹೊಸ ವಿಚಾರಕ್ಕೆ ನಾಂದಿ ಹಾಡಿತು. ಇದರ ಫಲವಾಗಿ ನಾಲ್ಕಾರು ಸ್ನೇಹಿತರಿಂದ ಸುಭಾಶ್ಚಂದ್ರ ಬೋಸ್ ಕಾರ್ಯಪಡೆ ರಚನೆಯಾಯಿತು’ ಎನ್ನುತ್ತಾರೆ ಕಾರ್ಯಪಡೆಯ ಅಧ್ಯಕ್ಷ ಕೇಶವ ಬೆ.ದೊಂಬೆ.

‘ವಾರಪೂರ್ತಿ ವ್ಯವಹಾರಿಕ ಚಟುವಟಿಕೆಯ ಒತ್ತಡದಲ್ಲಿ ಸಿಲುಕುವ ನಮಗೆ ಭಾನುವಾರದ ಶ್ರಮದಾನ ಮಾನಸಿಕ ನೆಮ್ಮದಿಯನ್ನೂ ಕೊಡುತ್ತದೆ. ಸಮಾನ ಮನಸ್ಕರು ಪರಸ್ಪರ ಚರ್ಚಿಸುತ್ತ, ಕೀಟಲೆ ಮಾಡುತ್ತ ಕೆಲಸ ಮಾಡುವುದರಿಂದ ಮನಸ್ಸು ವಿಕಸಿತಗೊಳ್ಳುತ್ತಿದೆ. ದಿನ ಕಳೆದಂತೆ ಕಾರ್ಯಪಡೆಯ ಸದಸ್ಯರ ಸಂಖ್ಯೆಯೂ ಹೆಚ್ಚುತ್ತಿದೆ’ ಎನ್ನುತ್ತಾರೆ ಅವರು.

‘ರುದ್ರಭೂಮಿಯ ಕುರಿತು ಭಯ, ಅಸಹ್ಯ ಹೋಗಲಾಡಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತರಾದ ಗೆಳೆಯರನ್ನು ಹಲವರು ಅನುಸರಿಸುತ್ತಿದ್ದಾರೆ. ಜನ್ಮದಿನವನ್ನು ರುದ್ರಭೂಮಿಯಲ್ಲಿ ಸ್ವಚ್ಛತೆ ಮಾಡಿ ಆಚರಿಸಲು ಕೆಲವರು ಹೆಸರು ನೊಂದಾಯಿಸುತ್ತಿದ್ದಾರೆ’ ಎಂದು ವಿ.ಪಿ.ಹೆಗಡೆ ವೈಶಾಲಿ ತಿಳಿಸಿದರು.

ಉದ್ಯಮಿಗಳಿಂದ ಉಚಿತ ಸೇವೆ:

ಸುಭಾಶ್ಚಂದ್ರ ಬೋಸ್ ಕಾರ್ಯಪಡೆಯಲ್ಲಿ ಉದ್ಯಮಿಗಳಾದ ಕೇಶವ ದೊಂಬೆ, ಗಜಾನನ ಹೆಗಡೆ, ನಾಗರಾಜ ನಾಯ್ಕ, ಗಣೇಶ ಶೇಟ್, ದೀಪಕ ಕಾಮತ್, ಸಂತೋಷ ರಾಯ್ಕರ್, ಚಿದಾನಂದ ನಾಯ್ಕ, ವಿ.ಡಿ.ಹೆಗಡೆ, ಗಣಪತಿ ಗಂಗೊಳ್ಳಿ, ಗಿರೀಶ ನಾಯಕ, ಗಣಪತಿ ಯಲ್ಲಾಪುರ, ರಾಮಚಂದ್ರ ಹೆಗಡೆ, ಧನುಷ್ ನಾಯ್ಕ, ನಿತ್ಯಾನಂದ ಹಿರೇಮಠ, ಸದಾನಂದ ನಾಯಕ, ನಾಗರಾಜ ಗಂಗೊಳ್ಳಿ, ಉಮಾಪತಿ ಭಟ್, ಕುಮಾರ್ ಭಟ್, ಸತೀಶ ಭಟ್ ಇದ್ದಾರೆ. ವೈದ್ಯ ಡಾ.ರವಿಕಿರಣ ಪಟವರ್ಧನ ಮಾರ್ಗದರ್ಶಕರಾಗಿದ್ದಾರೆ. ಕಟ್ಟಿಗೆ ತರಲು ಶ್ರೀನಿವಾಸ ಹೆಬ್ಬಾರ, ನಾಗರಾಜ ಗಂಗೊಳ್ಳಿ, ಸದಾನಂದ ನಾಯಕ ಉಚಿತ ವಾಹನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

-----------------

ರುದ್ರಭೂಮಿಯಲ್ಲಿ ಸ್ವಚ್ಛತೆ ಸೇವೆ ಮಾಡುವುದು ವಿಶೇಷ ಅನುಭವ. ಒತ್ತಡ ಕಳೆದು ಮುಂದಿನ ವಾರಕ್ಕೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಇದು ನೆರವಾಗಿದೆ.

ಕೇಶವ ದೊಂಬೆ, ಸುಭಾಶ್ಚಂದ್ರ ಬೋಸ್ ಕಾರ್ಯಪಡೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.