ಕುಮಟಾ: ಒಂದೆಡೆ ನದಿ, ಸಮುದ್ರ ಮೀನಿನ ಕೊರತೆ ಎದುರಾಗಿರುವುದು ಮೀನುಗಾರ ವಲಯವನ್ನು ಕಂಗೆಡಿಸಿದೆ. ಇಂತಹ ಸಂದಿಗ್ಧ ಸ್ಥಿತಿಯ ನಡುವೆ ತಾಲ್ಲೂಕಿನ ಹಿಣಿ ಗ್ರಾಮದ ಉದಯ ಹಿಣಿ ಅವರು ಅಘನಾಶಿನಿ ನದಿಯಲ್ಲಿ ಪಂಜರದಲ್ಲಿ ಕುರುಡೆ ಮೀನು ಬೆಳೆಸಿ ನಡೆಸುತ್ತಿರುವ ಮೀನುಕೃಷಿ ಹೊಸ ವಿಶ್ವಾಸ ಮೂಡಿಸಿದೆ.
ಕಳೆದ ಐದು ವರ್ಷಗಳಿಂದ ನದಿಯಲ್ಲಿ ಪಂಜರ ಅಳವಡಿಸಿ ಮೀನು ಸಾಕುತ್ತಿರುವ ಅವರು ವಾರ್ಷಿಕವಾಗಿ ಲಕ್ಷಾಂತರ ಆದಾಯ ಗಳಿಕೆಯೊಂದಿಗೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ರಾಸಾಯನಿಕ ಆಹಾರ ನೀಡದೆ ಸಾವಯವ ಮಾದರಿಯಲ್ಲಿ ಮೀನುಕೃಷಿ ನಡೆಸುತ್ತಿರುವ ಉದಯ ಅವರು ಇತರ ಮೀನು ಕೃಷಿಕರಿಗೂ ಮಾದರಿ ಎನಿಸಿದ್ದಾರೆ.
‘ಮೀನುಗಾರಿಕೆ ಇಲಾಖೆಯ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (ಪಿ.ಎಂ.ಎಂ.ಎಸ್.ವೈ) ಆರಂಭದಲ್ಲಿ ಒಂದು ಸಾವಿರ ಮರಿಗಳನ್ನೊಳಗೊಂಡ ಎರಡು ಕುರಡೆ ಪಂಜರವನ್ನು ಅಘನಾಶಿನಿ ನದಿಯಲ್ಲಿ ಅಳವಡಿಸಿದ್ದೆ. ಆರಂಭದ ಪ್ರಯತ್ನದಲ್ಲೇ ಉತ್ತಮ ಯಶಸ್ಸು ಸಿಕ್ಕಿತು. ಇದು ಮೀನುಕೃಷಿ ವಿಸ್ತರಣೆಗೆ ಪ್ರೇರಣೆ ಒದಗಿಸಿತು’ ಎನ್ನುತ್ತಾರೆ ಉದಯ ಹಿಣಿ.
‘ಸದ್ಯ ಸುಮಾರು ಆರು ಪಂಜರಗಳನ್ನಿಟ್ಟು ಕುರುಡೆ ಮೀನಿನ ಮರಿಗಳನ್ನು ಬೆಳೆಸುತ್ತಿದ್ದೇನೆ. ಒಂದು ಪಂಜರದಲ್ಲಿ ಏಕಕಾಲಕ್ಕೆ ಒಂದು ಸಾವಿರ ಮರಿಗಳನ್ನು ಬಿಡಲಾಗುತ್ತದೆ. ಅವುಗಳಿಗೆ ಆಹಾರವಾಗಿ ಸಣ್ಣ ಮೀನುಗಳು, ಸಿಗಡಿ, ಮೀನಿನ ತುಂಡುಗಳನ್ನು ಒದಗಿಸಲಾಗುತ್ತದೆ. ಇವುಗಳನ್ನೇ ತಿಂದು ಬೆಳೆಯುವ ಮೀನುಗಳು ದಷ್ಟಪುಷ್ಟವಾಗುತ್ತವೆ’ ಎಂದು ವಿವರಿಸಿದರು.
‘ಮೀನುಗಳು ಬೆಳವಣಿಗೆ ಕಂಡ ಬಳಿಕ ಪ್ರತೀ ಮೀನು ಸರಾಸರಿ ಒಂದೂವರೆಯಿಂದ ಎರಡೂವರೆ ಕೆ.ಜಿ ತೂಗುತ್ತವೆ. ಬಲೆಯಿಂದ ತಪ್ಪಿಸಿಕೊಂಡ ಉಳಿದ ಮೀನು ಮುಂದಿನ ವರ್ಷ ಕೊಯ್ಲು ಮಾಡಿದಾಗ ಮೂರರಿಂದ ನಾಲ್ಕು ಕೆ.ಜಿ ವರೆಗೆ ತೂಗುತ್ತವೆ. ಸ್ಥಳೀಯ ಹಾಗೂ ಗೋವಾದಲ್ಲಿ ಕುರಡೆ ಮೀನಿಗೆ ಉತ್ತಮ ಮಾರುಕಟ್ಟೆಯಿದ್ದು, ಪ್ರತಿ ಕೆ.ಜಿಗೆ ₹500 ರಿಂದ ₹550ರ ವರೆಗೂ ದರ ಸಿಗುತ್ತಿದೆ’ ಎಂದರು.
ಸಮುದ್ರ ಮೀನುಗಳ ಕೊರತೆ ಈಚೆಗೆ ಹೆಚ್ಚುತ್ತಿದೆ. ಮೀನುಕೃಷಿಯಲ್ಲಿ ಹೆಚ್ಚೆಚ್ಚು ಜನರು ತೊಡಗಿಕೊಂಡರೆ ಮತ್ಸ್ಯಕ್ಷಾಮದ ಕೊರತೆಯನ್ನು ತಕ್ಕಮಟ್ಟಿಗೆ ನೀಗಿಸಬಹುದು.- ಉದಯ ಕಿಣಿ, ಮೀನು ಕೃಷಿಕ
‘ಸಾಮಾನ್ಯವಾಗಿ ಒಂದು ಸಾವಿರ ಮರಿಗಳ ಪ್ರತಿ ಕುರಡೆ ಮೀನು ಘಟಕಕ್ಕೆ ₹3 ಲಕ್ಷ ವೆಚ್ಚ ತಗಲುತ್ತದೆ. ಸರ್ಕಾರದಿಂದ ಘಟಕಕ್ಕೆ ಮಹಿಳೆಯರಿಗೆ ಶೇ.60 ರಷ್ಟು ಪುರುಷರಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುತ್ತದೆ. ಇದರ ಹೊರತಾಗಿ ಪ್ರತೀ ಘಟಕದ ಮರಿಗಳಿಗೆ ₹30 ಸಾವಿರ ಪ್ರತ್ಯೇಕ ಸಹಾಯಧನ ನೀಡಲಾಗುತ್ತದೆ. ನೈಸರ್ಗಿಕ ಮೀನು ಕೊರತೆಯ ಹಿನ್ನೆಲೆಯಲ್ಲಿ ಕೃತಕವಾಗಿ ಮೀನು ಉತ್ಪಾದನೆ ಮಾಡುವ ಉದ್ದೇಶದಿಂದ ಸರ್ಕಾರ ಕುರುಡೆ ಮೀನು ಕೃಷಿಗೆ ಪ್ರೋತ್ಸಾಹ ನಿಡುತ್ತಿದೆ’ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಮೇಲ್ವಿಚಾರಕ ಆರ್.ಬಿ.ಪಾಟೀಲ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.