ADVERTISEMENT

ಮುಂಡಗೋಡ: ಸಂಜೆಯಾಗುತ್ತಿದ್ದಂತೆ ರಂಗೇರುವ ಪ್ರಚಾರ

ಹಗಲಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು

ಶಾಂತೇಶ ಬೆನಕನಕೊಪ್ಪ
Published 1 ಡಿಸೆಂಬರ್ 2019, 13:35 IST
Last Updated 1 ಡಿಸೆಂಬರ್ 2019, 13:35 IST
ಪ್ರಚಾರಕ್ಕೆ ಹೋಗುವ ಮಾರ್ಗಮಧ್ಯೆ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್‌ ಭೇಟಿ ಮಾಡಿ ಮತಯಾಚಿಸಿದರು
ಪ್ರಚಾರಕ್ಕೆ ಹೋಗುವ ಮಾರ್ಗಮಧ್ಯೆ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್‌ ಭೇಟಿ ಮಾಡಿ ಮತಯಾಚಿಸಿದರು   

ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ಉಪಚುನಾವಣೆ ಸಮೀಪಿಸುತ್ತಿದೆ. ಬೆಳೆ ಕೊಯ್ಲು ಸುಗ್ಗಿಯಲ್ಲಿ ನಿರತರಾಗಿರುವ ರೈತರು ಹಾಗೂ ಕೂಲಿಯವರನ್ನು ಸಂಜೆಯ ನಂತರ ಭೇಟಿಯಾಗಿ ಮತಯಾಚಿಸಬೇಕಾದ ಅನಿವಾರ್ಯತೆ ರಾಜಕೀಯ ಪಕ್ಷಗಳಿಗೆ ಎದುರಾಗಿದೆ.

ಉಪಚುನಾವಣೆಯ ಬಗ್ಗೆ ತಾಲ್ಲೂಕಿನಲ್ಲಿ ಅಷ್ಟೊಂದು ಉತ್ಸಾಹ ಕಂಡುಬರುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಇಲ್ಲಿಯವರೆಗೂ ಉಪಚುನಾವಣೆಯ ಕಾವು ವೇಗ ಪಡೆದಿಲ್ಲ. ರೈತರಿಗೆ ಸುಗ್ಗಿಕಾಲ ಆಗಿದ್ದರಿಂದ, ರಾಜಕೀಯ ಪಕ್ಷಗಳಲ್ಲಿರುವ ರೈತರು, ಮತದಾರರು ಪ್ರಚಾರಕ್ಕಿಂತ ಹೆಚ್ಚು ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ.

ಹಗಲಿನಲ್ಲಿ ಪ್ರಚಾರ ಸಭೆ ನಡೆದಾಗ ಸಾರ್ವಜನಿಕರ ಸಂಖ್ಯೆ ಕಡಿಮೆ ಕಂಡುಬರುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಹೊಲ–ಗದ್ದೆಯತ್ತ ತೆರಳಿರುತ್ತಾರೆ. ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ನಂತರ ಜನರ ಸಂಖ್ಯೆ ಹೆಚ್ಚಾಗಿರುತ್ತದೆ. ವಿವಿಧ ಪಕ್ಷಗಳ ಅಭ್ಯರ್ಥಿ ಹಾಗೂ ಮುಖಂಡರು, ರೈತರನ್ನು ಭೇಟಿ ಆಗುವ ಉದ್ದೇಶದಿಂದ, ಸಂಜೆಯ ವೇಳೆಗೆ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ADVERTISEMENT

‘ಹಗಲಿನಲ್ಲಿ ಗಡಿಬಿಡಿಯಿಂದ ಪ್ರಚಾರ ಮಾಡುವ ಅಭ್ಯರ್ಥಿಗಳು, ಮಧ್ಯಾಹ್ನ ಊಟದ ನಂತರ ಅಲ್ಲಲ್ಲಿ ವಿರಾಮ ಪಡೆದುಕೊಳ್ಳುತ್ತಾರೆ. ಸಂಜೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅನೇಕ ಸಭೆಗಳನ್ನು ನಡೆಸುತ್ತಾರೆ. ಸಂಜೆಯ ನಂತರ ನಡೆಯುತ್ತಿರುವ ಪ್ರಚಾರ ಸಭೆಗಳು ಪಕ್ಷಗಳಿಗೆ ಅನುಕೂಲ ಆಗುತ್ತಿವೆ’ ಎಂದು ಕಾರ್ಯಕರ್ತರು ಹೇಳುತ್ತಾರೆ.

ಸಮಾವೇಶ ನಡೆದಾಗ ಜನರಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಕೃಷಿ ಕೆಲಸಕ್ಕೆ ಹೋಗುವರನ್ನು ಸಹ ಸ್ಥಳೀಯ ಮುಖಂಡರು ಮನವೊಲಿಸಿ, ಸಮಾವೇಶಕ್ಕೆ ಕರೆತರಬೇಕಾದ ಪರಿಸ್ಥಿತಿ ಕಂಡುಬಂದಿತ್ತು. ಸಾರ್ವಜನಿಕ ಸಭೆ, ಸಮಾರಂಭಗಳು ಈಗ ಮುಗಿದಂತಾಗಿದ್ದು, ಮನೆ ಮನೆ ಪ್ರಚಾರಕ್ಕೆ ವಿವಿಧ ಪಕ್ಷಗಳು ಕಾರ್ಯಕರ್ತರು ಧುಮುಕಿದ್ದಾರೆ.

‘ಚುನಾವಣೆ ಬಂದಿದೆ. ಆದರೆ ಹೊಲದಲ್ಲಿ ಗೊಂಜಾಳ ಹಾಗೂ ಭತ್ತ ಕಟಾವು ಮಾಡಿಸಬೇಕಾಗಿದೆ. ಕೂಲಿಯವರ ಕೊರತೆ ಇದ್ದರಿಂದ ಯಂತ್ರಗಳನ್ನು ಬಳಸುತ್ತಿದ್ದೇವೆ. ಇದೆಲ್ಲ ಮುಗಿದ ಮೇಲೆ ಚುನಾವಣೆ ಕಡೆ ಲಕ್ಷ್ಯ ಹಾಕಿದರಾಯಿತು’ ಎನ್ನುತ್ತಾರೆ ರೈತ ಜಗದೀಶ ಓಣಿಕೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.