ADVERTISEMENT

ಕಾರವಾರ: ‘ಮತ ಲೆಕ್ಕ’ ಆರಂಭಿಸಿದ ಮುಖಂಡರು

ವಿಶ್ರಾಂತಿಗೆ ಜಾರಿದ ಅಭ್ಯರ್ಥಿಗಳು: 27 ದಿನದ ಬಳಿಕ ಫಲಿತಾಂಶ

ಗಣಪತಿ ಹೆಗಡೆ
Published 9 ಮೇ 2024, 6:36 IST
Last Updated 9 ಮೇ 2024, 6:36 IST
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಖಾನಾಪುರದ ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಸಭೆ ನಡೆಸಿದರು
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಖಾನಾಪುರದ ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಸಭೆ ನಡೆಸಿದರು   

ಕಾರವಾರ: ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಕ್ಷೇತ್ರದಾದ್ಯಂತ ರಾಜಕೀಯ ಕಾವೇರಿತ್ತು. ಮತಬೇಟೆಗೆ ವಾಗ್ಯುದ್ಧ, ವಾಕ್‍ ಪ್ರಹಾರ, ಬಿರುಸಿನ ಪ್ರಚಾರ ನಡೆಸಿ ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ವಿಶ್ರಾಂತಿಗೆ ಜಾರಿದರು.

ಆದರೆ, ಮತದಾನ ಮುಗಿಯುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಬೂತ್ ಮಟ್ಟದ ಮತ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಷ್ಟು ದಿನ ಹೋದಲ್ಲಿ ಬಂದಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಚರ್ಚೆ ಸಾಮಾನ್ಯವಾಗಿತ್ತು. ಈಗ ಯಾರು ಎಷ್ಟು ಮತ ಪಡೆಯಬಹುದು ಎಂಬ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಣದಲ್ಲಿ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ನಡೆದಿತ್ತು. ಎಸ್.ಯು.ಐ.ಸಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಹೊರತಾಗಿ ಉಳಿದ ಅಭ್ಯರ್ಥಿಗಳು ಅಷ್ಟಾಗಿ ಪ್ರಚಾರವನ್ನೂ ನಡೆಸಲಿಲ್ಲ.

ADVERTISEMENT

ಮಂಗಳವಾರ ಸಂಜೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೆ ಬಿಜೆಪಿ, ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಪ್ರಮುಖರು, ಮುಖಂಡರು ಮತದಾನ ನಡೆದ ಪ್ರಮಾಣಕ್ಕೆ ತಾಳೆ ಹಾಕಿ ತಮ್ಮ ಪಕ್ಷಕ್ಕೆ ಎಷ್ಟು ಮತ ಬಿದ್ದಿದೆ ಎಂಬುದರ ಲೆಕ್ಕಾಚಾರ ಆರಂಭಿಸಿದ್ದಾರೆ. ಪ್ರತಿ ಬೂತ್‍ನಲ್ಲಿ ಟೇಬಲ್ ಹಾಕಿದ್ದ ಪಕ್ಷಗಳ ಪ್ರಮುಖರು ತಮ್ಮ ಬೆಂಬಲಿಸಿ ಎಷ್ಟು ಜನ ಮತ ನೀಡಿರಬಹುದು ಎಂಬುದನ್ನು ಅಂದಾಜಿಸಿ, ಅಭ್ಯರ್ಥಿಗಳೊಂದಿಗೆ ಚರ್ಚೆಗೆ ಇಳಿದಿದ್ದಾರೆ.

ಬಿಜೆಪಿ ಮುಖಂಡರು ಧ್ರುವೀಕರಣಗೊಂಡ ಮತಗಳ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಗ್ಯಾರಂಟಿ ಯೋಜನೆಯ ಫಲವಾಗಿ ಬಿದ್ದ ಮತಗಳ ಲೆಕ್ಕ ಹಾಕುತ್ತಿದ್ದಾರೆ.

‘ಕ್ಷೇತ್ರದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿರುವ ಕಾರಣ ಫಲಿತಾಂಶ ಕುತೂಹಲವಾಗಿರುವ ಸಾಧ್ಯತೆ ಇದೆ. ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ ನಡೆದಿದ್ದರಿಂದ ಮೇಲ್ನೋಟಕ್ಕೆ ಸಮಬಲದ ಹೋರಾಟ ಕಾಣಿಸುತ್ತಿದೆ. ಬಿಜೆಪಿ ನಾಯಕರು ಮೋದಿ ಅಲೆಯಲ್ಲಿ ತಮಗೆ ಯುವ ಮತದಾರರು, ನಗರ ವ್ಯಾಪ್ತಿಯ ಮತದಾರರು ಬೆಂಬಲಿಸಿರುವ ಕುರಿತು ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಯ ಫಲವಾಗಿ ಬಿದ್ದ ಮಹಿಳಾ ಮತಗಳು, ಗ್ರಾಮೀಣ ಭಾಗದಲ್ಲಿರುವ ಸಾಂಪ್ರದಾಯಿಕ ಮತಗಳು ತಮ್ಮತ್ತ ವಾಲಿರುವ ಚರ್ಚೆಯಲ್ಲಿ ತೊಡಗಿದ್ದಾರೆ’ ಎಂದು ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು ಪ್ರತಿಕ್ರಿಯಿಸಿದರು.

ಮನೆಯಲ್ಲೇ ಸಭೆ ನಡೆಸಿದ ಅಂಜಲಿ
ಬೆಳಗಾವಿ ಜಿಲ್ಲೆ ಖಾನಾಪುರದವರಾದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಓಡಾಟ ನಡೆಸಿ ಪ್ರಚಾರ ಕೈಗೊಂಡಿದ್ದರು. ಮತದಾನ ಮುಗಿಯುತ್ತಿದ್ದಂತೆ ಅವರು ಖಾನಾಪುರದಲ್ಲಿನ ತಮ್ಮ ನಿವಾಸದಲ್ಲಿ ವಿಶ್ರಾಂತಿಗೆ ಜಾರಿದರು. ಮಕ್ಕಳೊಂದಿಗೆ ಕೆಲ ಹೊತ್ತು ಕಳೆದ ಅವರು ಬಳಿಕ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಮರಾಠಾ ಸಮುದಾಯದ ಮುಖಂಡರು ಸೇರಿದಂತೆ ಪಕ್ಷದ ಪ್ರಮುಖರೊಂದಿಗೆ ಕೆಲ ಹೊತ್ತು ಚರ್ಚೆ ನಡೆಸಿದರು. ಬಳಿಕ ಮೊಬೈಲ್ ಬಳಕೆಯಲ್ಲಿ ಕಾಲ ಕಳೆದರು. ‘ಉತ್ತರ ಕನ್ನಡ ಕ್ಷೇತ್ರದ ಜನರು ಬದಲಾವಣೆ ಬಯಸಿ ಮತದಾನ ಮಾಡಿದ್ದಾರೆ. ಗೆಲ್ಲುವ ವಿಶ್ವಾಸವಿದೆ’ ಎಂದು ಡಾ.ಅಂಜಲಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.