ADVERTISEMENT

ಉತ್ತರ ಕನ್ನಡದಲ್ಲೂ ‘ಇಂಗಾಲದ ಆದಾಯ’ ಪ‍ರಿಕಲ್ಪನೆ

ಗಜನಿ ಮಾಲೀಕರಿಗೆ ಕಾಂಡ್ಲಾದಿಂದ ಆದಾಯ!; ಪ್ರಾಯೋಗಿಕವಾಗಿ 150 ಹೆಕ್ಟೇರ್ ಗುರುತು

ಸದಾಶಿವ ಎಂ.ಎಸ್‌.
Published 13 ಜನವರಿ 2022, 3:13 IST
Last Updated 13 ಜನವರಿ 2022, 3:13 IST
ಸ್ನೇಹಕುಂಜ ಸಂಸ್ಥೆಯ ನೇತೃತ್ವದಲ್ಲಿ ಬೆಳೆಸಲಾಗಿರುವ ಕಾಂಡ್ಲಾ ಸಸಿಗಳನ್ನು ನಾಟಿ ಮಾಡುವ ಗಜನಿ ಪ್ರದೇಶಕ್ಕೆ ಸಾಗಿಸುತ್ತಿರುವುದು
ಸ್ನೇಹಕುಂಜ ಸಂಸ್ಥೆಯ ನೇತೃತ್ವದಲ್ಲಿ ಬೆಳೆಸಲಾಗಿರುವ ಕಾಂಡ್ಲಾ ಸಸಿಗಳನ್ನು ನಾಟಿ ಮಾಡುವ ಗಜನಿ ಪ್ರದೇಶಕ್ಕೆ ಸಾಗಿಸುತ್ತಿರುವುದು   

ಕಾರವಾರ: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ‘ಇಂಗಾಲದ ಆದಾಯ’ವು (ಕಾರ್ಬನ್ ಕ್ರೆಡಿಟ್), ಉತ್ತರ ಕನ್ನಡದಲ್ಲೂ ಚಾಲ್ತಿಗೆ ಬರಲು ಸಿದ್ಧವಾಗಿದೆ. ಕರಾವಳಿಯಲ್ಲಿ ಪಾಳುಬಿದ್ದಿರುವ ಸುಮಾರು 150 ಹೆಕ್ಟೇರ್ ಗಜನಿ ಪ್ರದೇಶದಲ್ಲಿ ನೆಡಲಾಗುವ ಕಾಂಡ್ಲಾ ಗಿಡಗಳು, ಜಮೀನು ಮಾಲೀಕರಿಗೆ 15 ವರ್ಷ ಆದಾಯವನ್ನೂ ನೀಡಬಲ್ಲವು.

ಹೌದು, ಇಂಥದ್ದೊಂದು ಪರಿಸರ ಪೂರಕವಾದ ಕಾರ್ಯವೊಂದು ಕರಾವಳಿಯಲ್ಲಿ ಜಾರಿಯಾಗುತ್ತಿದೆ. ಹೊನ್ನಾವರದ ಕಾಸರಕೋಡಿನ ಸ್ನೇಹಕುಂಜ, ಐ.ಎಫ್.ಎಚ್.ಡಿ, ವಿ.ಎನ್‌.ವಿ ಅಡ್ವೈಸರಿ ಮತ್ತು ಕನ್ಸರ್ನ್ ಇಂಡಿಯಾ ಸಂಸ್ಥೆಗಳು ಜೊತೆಯಾಗಿ ಈ ಕಾರ್ಯದಲ್ಲಿ ತೊಡಗಿವೆ.

‘ಇಂಗಾಲದ ಆದಾಯ’ ಎಂದರೇನು?:

ADVERTISEMENT

‘ಬೃಹತ್ ಬಹುರಾಷ್ಟ್ರೀಯ ಉದ್ದಿಮೆಗಳು, ವಾತಾವರಣಕ್ಕೆ ಸೇರಿಸುವ ಇಂಗಾಲದ ಡೈ ಆಕ್ಸೈಡ್‌ಗೆ ಪ್ರತಿಯಾಗಿ ವಿವಿಧ ದೇಶಗಳಲ್ಲಿ ಭಾರಿ ತೆರಿಗೆ ವಿಧಿಸಲಾಗುತ್ತದೆ. ಇಂಗಾಲದ ಡೈ ಆಕ್ಸೈಡ್ ಪ್ರಮಾಣಕ್ಕೆ ಅನುಗುಣವಾಗಿ ಆಮ್ಲಜನಕ ಉತ್ಪಾದಿಸಲು ಗಿಡಗಳನ್ನು ನೆಡಲೂ ಅವಕಾಶವಿದೆ’ ಎನ್ನುತ್ತಾರೆ ಕಡಲಜೀವ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.

‘ಆದರೆ, ಮುಂದುವರಿದ ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಥಳಾಭಾವವಿದೆ. ಹಾಗಾಗಿ ಅವುಗಳು ಇತರ ದೇಶಗಳಲ್ಲಿ ಹಸಿರೀಕರಣಕ್ಕೆ ಹಣ ನೀಡುತ್ತವೆ. ಈ ಮೂಲಕ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತವೆ. ಈ ರೀತಿಯ ಕಾರ್ಯಗಳು ಇಂಡೋನೇಷ್ಯಾ, ಮಲೇಷ್ಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ’ ಎಂದು ಅವರು ವಿವರಿಸುತ್ತಾರೆ. ಉತ್ತರ ಕನ್ನಡದಲ್ಲಿ ಆರಂಭವಾಗಿರುವ ಈ ಕಾರ್ಯದಲ್ಲಿ ಅವರೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

6 ಲಕ್ಷ ಕಾಂಡ್ಲಾ ಸಸಿ ನಾಟಿ:

‘ಜಿಲ್ಲೆಯ ವಿವಿಧೆಡೆ 15–20 ವರ್ಷಗಳಿಂದ ಗದ್ದೆ, ಗಜನಿ ಪ್ರದೇಶಗಳು ಕೃಷಿ ಮಾಡದೇ ಪಾಳು ಬಿದ್ದಿವೆ. ಅವುಗಳಲ್ಲಿ ಇನ್ನೂ 15– 20 ವರ್ಷ ಏನೂ ಮಾಡಲು ಸಾಧ್ಯವಿಲ್ಲ ಎನ್ನುವಂಥ ಜಾಗವನ್ನು ಹುಡುಕಿ ನಾವೇ ಕಾಂಡ್ಲಾ ಗಿಡಗಳನ್ನು ನೆಡುತ್ತಿದ್ದೇವೆ. ವಾತಾವರಣದಲ್ಲಿರುವ ಇಂಗಾಲವನ್ನು ಕಡಿಮೆ ಮಾಡಲು ಇದು ಸಹಕಾರಿ’ ಎನ್ನುತ್ತಾರೆ ಸ್ನೇಹಕುಂಜ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಹೆಗಡೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಮಾಸೂರು, ಐಗಳಕೂರ್ವೆ, ಬೇಲೆ, ಪುಟ್ಟುಬೇಲೆಯಲ್ಲಿ ವಿವಿಧ ತಳಿಗಳ, ಸುಮಾರು ಆರು ಲಕ್ಷ ಕಾಂಡ್ಲಾ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಖಾಸಗಿಯಾಗಿ ಇಷ್ಟೊಂದು ಪ್ರಮಾಣದಲ್ಲಿ ಕಾಂಡ್ಲಾ ಸಸಿಗಳನ್ನು ಬೆಳೆಸಿದ್ದು ಇದೇ ಮೊದಲು’ ಎನ್ನುತ್ತಾರೆ.

‘ನಮ್ಮ ಜಿಲ್ಲೆಯಲ್ಲೂ ಕಾಂಡ್ಲಾ ಸಸಿ ನೆಡಲು ಅವಕಾಶ ಕೊಟ್ಟಿರುವ ಜಮೀನು ಮಾಲೀಕರನ್ನು ಇಂಗಾಲದ ಆದಾಯ ಎಂಬ ಪರಿಕಲ್ಪನೆಗೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಇದಾದರೆ, ಅವರಿಗೆ ಪ್ರತಿ ಎಕರೆಗೆ ವರ್ಷಕ್ಕೆ ₹8 ಸಾವಿರದಿಂದ ₹10 ಸಾವಿರ ಆದಾಯ ಸಿಗಲಿದೆ’ ಎಂದು ವಿವರಿಸುತ್ತಾರೆ.

‘ಇದರೊಂದಿಗೇ ಕಾಂಡ್ಲಾ ಪರಿಸರ ಆಧಾರಿತ ಉದ್ಯೋಗಾವಕಾಶಗಳನ್ನೂ ನೀಡಲಾಗುತ್ತದೆ. 100 ಜೇನು ಪೆಟ್ಟಿಗೆ, ಸಾವಯವ ಗೊಬ್ಬರ ತಯಾರಿಕೆ, ಔಷಧೀಯ ಗಿಡಗಳನ್ನು ನೆಡುವುದು, ಮೀನುಗಾರರಿಗೆ ಸೌರಶಕ್ತಿಯ ಡ್ರೈಯರ್, ಸೀಗಡಿ ಕೃಷಿ ಮುಂತಾದವನ್ನು ಮಾಡಲೂ ಅವಕಾಶವಿದೆ’ ಎಂದು ಹೇಳುತ್ತಾರೆ.

ಕಾಂಡ್ಲವೇ ಯಾಕೆ?:

ವಿಶಿಷ್ಟ ಸಸ್ಯ ಪ್ರಭೇದ ಕಾಂಡ್ಲಾವು, ವಾತಾವರಣದಲ್ಲಿರುವ ಅತಿ ಹೆಚ್ಚು ಪ್ರಮಾಣದ ಇಂಗಾಲದ ಡೈ ಆಕ್ಸೈಡ್‌ ಅನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿವೆ. ದೊಡ್ಡ ಮರವೊಂದಕ್ಕೆ ಹೋಲಿಸಿದರೆ, ಕಾಂಡ್ಲಾದ ಸಣ್ಣ ಸಸ್ಯವು ಹೆಚ್ಚು ಪರಿಣಾಮಕಾರಿ. ಕಾಂಡ್ಲಾದ ಗಿಡವನ್ನು ಕಡಿದರೂ ಅದರ ಕಾಂಡ ಮತ್ತು ಬೇರು ಇಂಗಾಲದ ಡೈ ಆಕ್ಸೈಡ್‌ ಅನ್ನು ಹೀರಿಕೊಳ್ಳುತ್ತದೆ ಎನ್ನಲಾಗಿದೆ.

‘ಕಾಂಡ್ಲಾ ಪರಿಸರದ ನೀರಿನಲ್ಲಿ ಮೀನು, ಸೀಗಡಿ ಸೇರಿದಂತೆ ವಿವಿಧ ಜಲಚರಗಳು, ಕ್ರಿಮಿಕೀಟಗಳು, ಹಕ್ಕಿಗಳು, ಜೇನುನೊಣಗಳು ವಾಸಿಸುತ್ತವೆ. ಅವುಗಳ ಸಂರಕ್ಷಣೆಯೂ ಆಗುತ್ತದೆ. ಗಜನಿಯಲ್ಲಿ ನೆಡಲು ಅವಕಾಶವಿದೆ. ಹಾಗಾಗಿ ಜಾಗತಿಕವಾಗಿ ಹಲವು ಬೃಹತ್ ಕಂಪನಿಗಳು ಈಗ ಕಾಂಡ್ಲಾ ನಾಟಿಯ ಮೇಲೆ ಹಣ ಹೂಡುತ್ತಿವೆ’ ಎನ್ನುತ್ತಾರೆ ಡಾ.ಪ್ರಕಾಶ ಮೇಸ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.