ADVERTISEMENT

ಹಳಿಯಾಳ | ರೈತರ ಮೊಗದಲ್ಲಿ ಮಂದಹಾಸ ತಂದ ಗೋಡಂಬಿ

ನಿರೀಕ್ಷೆಗೂ ಮೀರಿ ದೊರೆತ ಫಸಲು: ದರದಲ್ಲೂ ಏರಿಕೆ

ಸಂತೋಷ ಹಬ್ಬು
Published 14 ಮೇ 2024, 4:32 IST
Last Updated 14 ಮೇ 2024, 4:32 IST
ಹಳಿಯಾಳದ ಭಾನುವಾರದ ಸಂತೆಯ ದಿನ ಗೋಡಂಬಿ ಬೀಜಗಳನ್ನು ವ್ಯಾಪಾರಸ್ಥರು ಖರೀದಿಸಿ ಮೂಟೆಗಳಲ್ಲಿ ತುಂಬಿರುವುದು
ಹಳಿಯಾಳದ ಭಾನುವಾರದ ಸಂತೆಯ ದಿನ ಗೋಡಂಬಿ ಬೀಜಗಳನ್ನು ವ್ಯಾಪಾರಸ್ಥರು ಖರೀದಿಸಿ ಮೂಟೆಗಳಲ್ಲಿ ತುಂಬಿರುವುದು   

ಹಳಿಯಾಳ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಗೋಡಂಬಿ ಫಸಲು ಉತ್ತಮವಾಗಿದ್ದು, ದರದಲ್ಲಿಯೂ ಏರಿಕೆ ಕಂಡಿರುವುದು ಬೆಳೆಗಾರರಲ್ಲಿ ಸಂತಸ ಉಂಟುಮಾಡಿದೆ.

ಹಳಿಯಾಳ, ದಾಂಡೇಲಿ ಭಾಗದಲ್ಲಿ ಸುಮಾರು 40 ರಿಂದ 50 ಹೆಕ್ಟೇರ್‌ ಜಮೀನಿನಲ್ಲಿ ಗೋಡಂಬಿ ಬೆಳೆ ಬೆಳೆಸಲಾಗುತ್ತಿದೆ. ಗೇರು ಮರಗಳಿಗೆ ಹೂವು ಬಿಟ್ಟಾಗ ತೀವ್ರ ತರಹದ ಬಿಸಿಲು ಬಿದ್ದ ಕಾರಣ ಹೂವು ಉದುರುವ ಸಮಸ್ಯೆ ಎದುರಾಗಿತ್ತು. ಇದರಿಂದ ರೈತರು ಸಹಜವಾಗಿ ಚಿಂತೆಗೀಡಾಗಿದ್ದರು. ಆದರೆ, ನಂತರದ ದಿನಗಳಲ್ಲಿ ಬೆಳೆ ಚೇತರಿಸಿಕೊಂಡಿದ್ದು ನಿರೀಕ್ಷೆಗೂ ಮೀರಿ ಫಸಲು ಸಿಕ್ಕಿದೆ ಎಂಬ ಅಭಿಪ್ರಾಯ ರೈತ ವಲಯದಲ್ಲಿದೆ.

ಅಲ್ಲದೆ ದರವೂ ಉತ್ತಮವಿರುವುದು ಇನ್ನಷ್ಟು ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಗೋಡಂಬಿ ಬೆಳೆಯ ಬೆಲೆ ಸುಮಾರು ಕೆ.ಜಿ ಗೆ ₹70 ರಿಂದ 80 ಇತ್ತು. ಈ ಬಾರಿ ಕೆ.ಜಿಗೆ ₹100 ರಿಂದ 110ಕ್ಕೆ ಏರಿಕೆ ಕಂಡಿದೆ. ಉತ್ತಮ ತಳಿಯ ಗೋಡಂಬಿ ಬೀಜದ ದರ ಪ್ರತಿ ಕೆ.ಜಿಗೆ ₹130 ರಿಂದ 135ರವರೆಗೂ ಇದೆ.

ADVERTISEMENT

ಹಳಿಯಾಳದ ಮಾರುಕಟ್ಟೆಯಲ್ಲಿ ಗೋಡಂಬಿ ವ್ಯಾಪಾರಸ್ಥರು, ದಲಾಲರು ಖರೀದಿಸಿದ ಗೋಡಂಬಿ ಗೋವಾ, ಖಾನಾಪುರ, ಮುಂಡಗೋಡ ಭಾಗದಲ್ಲಿರುವ ಸಂಸ್ಕರಣಾ ಘಟಕಕ್ಕೆ ರವಾನಿಸಲಾಗುತ್ತಿದೆ.

‘ಕೇವಲ ನಾಲ್ಕು ಗಿಡಗಳಿಂದ ಸುಮಾರು ಎರಡು ಕ್ವಿಂಟಲ್‌‍ನಷ್ಟು ಗೋಡಂಬಿ ಬೀಜದ ಫಸಲು ಈ ಬಾರಿ ಸಿಕ್ಕಿದೆ. ಗದ್ದೆಯಲ್ಲಿ ಗೋಡಂಬಿ ಬೀಜಗಳನ್ನು ಕೆಲವು ಕಿಡಿಗೇಡಿಗಳು ಕಳ್ಳತನ ಮಾಡಿಕೊಂಡು ಹೋಗುವುದರಿಂದ ಹಾನಿ ಅನುಭವಿಸಿದ್ದೇವೆ’ ಎಂದು ರೈತ ಮಹಿಳೆ ಪಾರ್ವತಿ ಖಟಾವಕರ ಹೇಳಿದರು.

‘ಒಂದೂವರೆ ಎಕರೆ ಪ್ರದೇಶದಲ್ಲಿ ಅಲ್ಲಲ್ಲಿ ಗೋಡಂಬಿ ಗಿಡ ಬೆಳೆಸಿದ್ದೇನೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಫಸಲು ಸಿಕ್ಕಿದೆ. ಎರಡು, ಮೂರು ಹಂತದಲ್ಲಿ ಬೆಳೆ ಮಾರಾಟ ಮಾಡುತ್ತಿದ್ದೇವೆ’ ಎಂದು ಮುತ್ತಲಮುರಿ ಗ್ರಾಮದ ಗೋಡಂಬಿ ಬೆಳಗಾರ ಕೈತಾನ ಬಾರಬೋಜಾ ಹೇಳಿದರು.

‘ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ತಳಿಯ ಗೊಡಂಬಿ ಮಾರುಕಟ್ಟೆಗೆ ಬರುತ್ತಿದೆ. ಬೆಳೆಯ ಗುಣಮಟ್ಟಕ್ಕೆ ತಕ್ಕಂತೆ ಬೆಳೆಗಾರರಿಗೆ ದರ ನೀಡಲಾಗುತ್ತಿದೆ’ ಎಂದು ವ್ಯಾಪಾರಸ್ಥರಾದ ರಾಜೇಶ ಡಿಸೋಜಾ, ನ್ಯೂಟನ್ ಡಿಸೋಜಾ ಹೇಳುತ್ತಾರೆ.

ಗೋಡಂಬಿ ಬೆಳೆಯಲು ಸಹಾಯಧನ

‘ಹಳಿಯಾಳ ದಾಂಡೇಲಿ ಭಾಗದಲ್ಲಿ ಉಲ್ಲಾಳ ವೆಂಗುರ್ಲಾ–4ವೆಂಗುರ್ಲಾ–7 ತಳಿಯ ಗೋಡಂಬಿ ಬೀಜದ ಬೆಳೆಗಳನ್ನು ಬೆಳೆಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ವೆಂಗುರ್ಲಾ–4 ಹಾಗೂ ವೆಂಗುರ್ಲಾ–7 ಗೋಡಂಬಿ ಸಸಿ ನೆಡಲು ರೈತರಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಗೋಡಂಬಿ ಸಸಿ ನೆಟ್ಟು ಎರಡು ಮೂರು ವರ್ಷಗಳ ಕಾಲ ಸರಿಯಾಗಿ ಜೋಪಾನ ಮಾಡಿದ್ದಲ್ಲಿ ಮುಂದೆ ನೈಸರ್ಗಿಕವಾಗಿ ಬೆಳೆದು ಉತ್ತಮ ಫಸಲು ಪಡೆದುಕೊಳ್ಳಬಹುದು. ಇಲಾಖೆಯಿಂದ ಒಂದು ಹೆಕ್ಟೇರ್ ಗೋಡಂಬಿ ಬೆಳೆ ಬೆಳೆಸಲು ₹12 ಸಾವಿರ ಪ್ರೋತ್ಸಾಹ ಧನವನ್ನು ರಾಷ್ಟ್ರೀಯ ತೋಟಗಾರಿಕೆ ಮಿಶನ್‌ ಮೂಲಕ ನೀಡಲಾಗುತ್ತಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಆರ್.ಹೇರಿಯಾಳ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.